ಪುತ್ತೂರು : ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ, ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ಇಂದು ಭಾರತ ಬಲಿಷ್ಟ ರಾಷ್ಟ್ರವಾಗಿ ಉಳಿದಿದೆ ಎಂದು ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು ಹೇಳಿದರು.
ಅವರು ಕೋಡಿಂಬಾಡಿ ಗ್ರಾಪಂ ಸಭಾಂಗಣದಲ್ಲಿ ನಡೆದ ಅಂತರ್ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

ಇಂದು ದೇಶದಲ್ಲಿ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ, ಅಧಿಕಾರ ದೊರೆಯಲು ಸಂವಿಧಾನ ಕಾರಣವಾಗಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ವಿಶ್ವಕ್ಕೆ ಮಾದರಿಯಾಗಿದೆ.
ತುಳಿಯಲ್ಪಟ್ಟ ಸಮುದಾದ ಇಂದು ಸಮಾಜದಲ್ಲಿ ಉನ್ನತ ಸ್ಥಾನಮಾನದಲ್ಲಿರುವಂತಾಗಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯೇ ಕಾರಣವಾಗಿದೆ ಎಂಬುದನ್ನು ನಾವು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ನೆಲೆಯೂರಿದ್ದ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಿದ್ದೇ ನಮ್ಮ ಸಂವಿಧಾನ. ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ನೀಡುವ ಮೂಲಕ ತಮಗಿಷ್ಟವಾದ ಜನಪ್ರತಿನಿಧಿಯನ್ನು ಆಯ್ಕೆ ಮಾಡಲು ಅವಕಾಶ ನೀಡಿರುವುದು ನಮ್ಮ ಸಂವಿಧಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ, ಸದಸ್ಯರುಗಳಾಗ ರಾಮಣ್ಣ ಗೌಡ ಗುಂಡಲೆ, ಜಗನ್ನಾಥ ಶೆಟ್ಟಿ ನಡುಮನೆ. ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು, ಮೋಹಿ , ವಿಶ್ವನಾಥ ಕೃಷ್ಣಗಿರಿ, ಪುಷ್ಪ ಬೆಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಗ್ರಾಪಂ ಪಿಡಿಒ ವಿಲ್ಪ್ರೆಡ್ ಸ್ವಾಗತಿಸಿದರು. ಕಾರ್ಯದರ್ಶಿ ಅಣ್ಣು ವಂದಿಸಿದರು. ಸಿಬ್ಬಂದಿಗಳಾದ ಲೀಲಾವತಿ, ಕುಸುಮ , ರೀತಾ,ಕಾವ್ಯ , ಸುರೇಶ, ಸುರೇಶ ಸಹಕರಿಸಿದರು.

























