ಬೆಂಗಳೂರು : ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ವಂಚನೆ ಕೇಸ್ ಸಂಬಂಧ ಚೈತ್ರಾ ಕುಂದಾಪುರ ಆ್ಯಂಡ್ ಟೀಂ ಬಂಧನ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಗೋವಿಂದ ಬಾಬು ಪೂಜಾರಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ಸೂಚಿಸಿದ್ದಾರೆ.
ಸಿಸಿಬಿ ಪೊಲೀಸರು ಗೋವಿಂದ ಬಾಬು ಬಳಿ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ. ಪಕ್ಷ ಹಣದ ಮೂಲವನ್ನು ತಿಳಿಸದಿದ್ರೆ ಗೋವಿಂದ ಬಾಬು ಪೂಜಾರಿಗೂ ಸಂಕಷ್ಟ ಎದುರಾಗಲಿದೆ.
ಈಗಾಗಲೇ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ವಿಜಯನಗರದ ನಿವಾಸ, ಕೆಕೆ ಗೆಸ್ಟ್ ಹೌಸ್, ಗೋವಿಂದ ಬಾಬು ಪೂಜಾರಿ ಕಚೇರಿ ಸೇರಿ ಹಲವೆಡೆ ಮಹಜರು ನಡೆಸಲಾಗಿದೆ. ಸದ್ಯ ಐದು ಕೋಟಿ ಮೂಲದ ಹುಡುಕಾಟದಲ್ಲಿ ಸಿಸಿಬಿ ಇದೆ.
ಸಿಸಿಬಿ ಅಧಿಕಾರಿಗಳು ಗೋವಿಂದ ಪೂಜಾರಿಯ ಸಂಪೂರ್ಣ ಹಣದ ವಿವರ ಕಲೆ ಹಾಕುತ್ತಿದ್ದಾರೆ. ಹಣದ ಆದಾಯದ ಮೂಲದ ಬಗ್ಗೆಯೂ ಮಾಹಿತಿ ಕೇಳಿದ್ದಾರೆ. ಸಾಲ ಮಾಡಿ ಹಣ ಕೊಟ್ಟಿರುವೆ ಎಂದು ಗೋವಿಂದ ಪೂಜಾರಿ ತಿಳಿಸಿದ್ದಾರೆ. ಅದರ ಬಗ್ಗೆಯೂ ಸಿಸಿಬಿ ಪೊಲೀಸರು ತನಿಖೆ ನಡೆಸಲಿದ್ದಾರೆ.
ಬ್ಯಾಂಕ್ ನಿಂದ ಆ ಸಾಲದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ನಗದು ರೂಪದಲ್ಲಿ ಹಣ ನೀಡಿರುವ ಹಿನ್ನೆಲೆ ಈ ಎಲ್ಲಾ ಮಾಹಿತಿ ನೀಡಿಬೇಕಿದೆ. ಎಲ್ಲಾ ದಾಖಲಾತಿಗಳನ್ನ ಸಲ್ಲಿಸುವಂತೆ ಸಿಸಿಬಿ ಪೊಲೀಸರು ಗೋವಿಂದ ಬಾಬುಗೆ ತಿಳಿಸಿದ್ದಾರೆ.
ಇದುವರೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕ ಹಣವೆಷ್ಟು.!??
ಈ ಪ್ರಕರಣದಲ್ಲಿ ಇದೂವರೆಗೂ 2 ಕೋಟಿಗೂ ಹೆಚ್ಚು ಮೌಲ್ಯದ ನಗದು, ಚಿನ್ನ ಜಪ್ತಿ ಮಾಡಲಾಗಿದೆ. ಚೈತ್ರಾ ಕುಂದಾಪುರ ತನ್ನ ಸಂಬಂಧಿಕರ ಹೆಸರಲ್ಲಿ ಖಾಸಗಿ ಬ್ಯಾಂಕ್ನಲ್ಲಿ ಇಟ್ಟಿದ್ದ 1 ಕೋಟಿ ಎಂಟು ಲಕ್ಷದ ಠೇವಣಿ ಪತ್ರ ಜಪ್ತಿ ಮಾಡಲಾಗಿದೆ. ಚೈತ್ರಾಗೆ ಸೇರಿದ್ದ ಸುಮಾರು 65 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ತನ್ನ ಭಾವ ಮ್ಯಾನೇಜರ್ ಆಗಿದ್ದ ಬ್ಯಾಂಕ್ನಲ್ಲಿ ಇಟ್ಟಿದ್ದ 40 ಲಕ್ಷ ಜಪ್ತಿ ಮಾಡಲಾಗಿದೆ. ಹಾಗೂ ಶ್ರೀಕಾಂತ್ ಅಕೌಂಟ್ನಲ್ಲಿ ನಲವತ್ತೈದು ಲಕ್ಷ ಜಪ್ತಿ ಮಾಡಲಾಗಿದೆ.
ಸ್ವಾಮೀಜಿ ಈಗಾಗಲೇ 50 ಲಕ್ಷ ರೂಪಾಯಿ ಗೋವಿಂದ ಪೂಜಾರಿಗೆ ಹಿಂದಿರುಗಿಸಿದ್ದು. ಸದ್ಯ ಚೈತ್ರಾ ಖರೀದಿ ಮಾಡಿದ್ದ ಕಿಯಾ ಕಾರು ವಶಕ್ಕೆ ಪಡೆಯಲಾಗಿದೆ. ಸುಮಾರು ಮೂರು ಕೋಟಿ ಮೂವತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ ಹಣಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.