ಪುತ್ತೂರು : ಆರು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆಂಬ ಆರೋಪವನ್ನು ಎದುರಿಸುತ್ತಿದ್ದ ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಕೋತ್ನಡ್ಕ ನಿವಾಸಿ ಕಿಶೋರ್. ಕೆ. ಎಂಬವರನ್ನು ಪುತ್ತೂರಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಕಾಂತರಾಜು ಎಸ್ ವಿ ರವರು ನಿರಪರಾಧಿ ಎಂದು ಬಿಡುಗಡೆ ಗೊಳಿಸಲು ಆದೇಶಿಸಿರುತ್ತಾರೆ.
02/08/2017 ರಂದು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ದಂಡಕಜೆ ಎಂಬಲ್ಲಿ ಸಿಲ್ವೆಸ್ಟರ್ ಡಿಸೋಜ ರವರ ಹಳೆಯ ಮನೆಯಲ್ಲಿ, ರಾತ್ರಿ ವೇಳೆಯಲ್ಲಿ ಆರೋಪಿಯನ್ನಲಾಗಿದ್ದ ಕಿಶೋರ್. ಕೆ ರವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ಸುಳ್ಯ ಪೊಲೀಸ್ ಠಾಣೆಗೆ ವಿಳಂಬವಾಗಿ ದೂರನ್ನು ನೀಡಿದ್ದರು. ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 376 ಮತ್ತು ಪೋಕ್ಸೋ ಕಾಯ್ದೆಯ ಕಲಂ.5 ಮತ್ತು 6 ರ ಅನ್ವಯದಂತೆ ಪ್ರಕರಣ ದಾಖಲಿಸಿದ್ದರು.
ತದನಂತರ ತನಿಖೆ ಮುಂದುವರಿಸಿ ಆರೋಪಿ ಎನ್ನಲಾಗಿದ್ದ ಕಿಶೋರ್. ಕೆ.ರವರನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದ್ದರು. ನಂತರ ಪೊಲೀಸರು ಆರೋಪಿಯ ವಿರುದ್ಧ ದೋಷರೋಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ವೇಳೆ ಉಚ್ಚ ನ್ಯಾಯಾಲಯದ ಆದೇಶದಂತೆ, ಮಂಗಳೂರಿನ ಎರಡನೇ ಜಿಲ್ಲಾ ನ್ಯಾಯಾಲಯದಲ್ಲಿದ್ದ ಪ್ರಕರಣವು ಈ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ.
ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಪ್ರಾಸಿಕೂಷನ್ ತನ್ನ ಪರವಾಗಿ ಸುಮಾರು 26 ಸಾಕ್ಷಿಗಳ ಪೈಕಿ 12 ಸಾಕ್ಷಿಗಳನ್ನು ತನಿಖೆ ನಡೆಸಿತ್ತು. ತನಿಖೆ ನಂತರ ನ್ಯಾಯಾಲಯ ಪಕ್ಷಗಾರರ ವಾದ ವಿವಾದವನ್ನು ಆಲಿಸಿತ್ತು. ಈ ಹಂತದಲ್ಲಿ ಆರೋಪಿ ಪರ ವಕೀಲರಾದ ಮಹೇಶ್ ಕಜೆಯವರು ದೂರು ಸಲ್ಲಿಸುವಿಕೆಯಲ್ಲಿನ ವಿಳಂಬ,ಆಕೆಯ ವಯಸ್ಸನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ವಿಫಲತೆ, ಆರೋಪಿ ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಹೋಗಬಹುದಾದ ಸಾಧ್ಯತೆ, ಸಂತ್ರಸ್ಥೆ ಘಟನೆ ನಡೆದಿದೆ ಎನ್ನಲಾದ ಎರಡು ದಿನದ ಮೊದಲು ನಾಪತ್ತೆಯಾಗಿದ್ದು, ಆ ಎರಡು ದಿವಸ ಆಕೆ ಎಲ್ಲಿದ್ದಳು, ಯಾರ ಜೊತೆ ಇದ್ದಳು ಇತ್ಯಾದಿ ವಿಚಾರಗಳ ಕುರಿತು ತನಿಖೆ ನಡೆಸಿದೆ ಇರುವುದು,ಆರೋಪಿತ ಘಟನೆ ನಡೆದಿದೆ ಎನ್ನಲಾದ ಸಮಯದಲ್ಲಿ ಆರೋಪಿಯು ಘಟನಾ ಸ್ಥಳದಲ್ಲಿದ್ದ ಬಗ್ಗೆ ದಾಖಲೆಗಳಿಲ್ಲದಿರುವುದು , ಸೂಕ್ತ ವೈಜ್ಞಾನಿಕ ಸಾಕ್ಷ್ಯಧಾರ ಮತ್ತು ದಾಖಲೆಗಳ ಕೊರತೆ, ಸಾಕ್ಷಿದಾರರ ವ್ಯತಿರಿಕ್ತ ಹೇಳಿಕೆಗಳು ,ಇತ್ಯಾದಿಗಳ ಹಿನ್ನೆಲೆಯಲ್ಲಿ ಆರೋಪಿಯು ಈ ಕೃತ್ಯ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ ಮತ್ತು ತನಿಖೆಯಲ್ಲಿನ ವಿರೋಧಾಬಾಸಗಳ ಕಾರಣ, ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ವಾದಿಸಿದ್ದರು.
ಅಂತಿಮವಾಗಿ, ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್. ವಿ ರವರು ಪ್ರಾಸಿಕ್ಯೂಷನ್ ತನ್ನ ಕೇಸನ್ನು ಸಂಶಯಾತೀತವಾಗಿ ನಿರೂಪಿಸುವಲ್ಲಿ ವಿಫಲವಾಗಿದ್ದು ಆ ಕಾರ ಆರೋಪಿಯನ್ನು ನಿರ್ದೋಷಿ ಎಂದು ಆದೇಶಿಸಿರುತ್ತಾರೆ.
ಆರೋಪಿ ಪರ ವಕೀಲರಾದ ಪುತ್ತೂರಿನ ಕಜೆ ಲಾ ಚೇಂಬರ್ಸ್ ಮಹೇಶ್ ಕಜೆ ಮತ್ತು ಮಂಗಳೂರಿನ ರಾಜೇಶ್ ರೈಯವರು ವಾದಿಸಿದ್ದರು.

























