ಕಡಬ : ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ಕೆಳಗೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟು, ಇನ್ನೋರ್ವ ಸಣ್ಣ-ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಕಡಬದ ಅಂಚೆ ಕಚೇರಿ ಸಮೀಪ ನಡೆದಿದೆ.
ಮೃತ ವ್ಯಕ್ತಿಯನ್ನು ಕಡಬ ತಾಲೂಕಿನ ಗ್ರಾಮದ ಕಳಾರ ಸಮೀಪದ ಕುದ್ಕೋಳಿ ನಿವಾಸಿ, ಕೃಷಿಕ ಅಚ್ಚುತ್ತ ಗೌಡ (63) ಎಂದು ಗುರುತಿಸಲಾಗಿದೆ.

ಮೃತರು ಇಂದು ಸಂಜೆ ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮನೆಗೆ ಹೊರಟಿದ್ದ ವೇಳೆ ಅಂಚೆ ಕಛೇರಿ ಸಮೀಪದ ತಿರುವಿನಲ್ಲಿ ಅಚ್ಚುತ್ತ ಗೌಡ ಹಾಗೂ ಬಲ್ಯ ನಿವಾಸಿ ಚಂದ್ರಶೇಖರ ಎಂಬವರು ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟಿದ್ದಾರೆ.
ಗಂಭೀರ ಗಾಯಗೊಂಡ ಅಚ್ಚುತ್ತ ಗೌಡರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಹಾದಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಚಂದ್ರಶೇಖರ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ, ನಾಲ್ವರು ಮಕ್ಕಳು, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.