ಕಡಬ : ಬಸ್ ನಿಂದ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟ, ಇನ್ನೋರ್ವ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ಬಸ್ ನಿರ್ವಾಹಕ ಹಾಗೂ ಚಾಲಕನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಶಾಂತ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಬಸ್ ನಿರ್ವಾಹಕ ಆನಂದ ನಾಯ್ಕ್ ಹಾಗೂ ಬಸ್ ಚಾಲಕ ಶಶಿಧರ ಯು.ಆರ್. ವಿರುದ್ಧ ಪ್ರಕರಣ ದಾಖಲಾಗಿದೆ.
ಸೆ. 24 ರಂದು ಸಂಜೆ, ಕಡಬ ಪೇಟೆಯ ಪೋಸ್ಟ್ ಆಫೀಸ್ ಬಳಿ ಸುಬ್ರಹ್ಮಣ್ಯ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನ, ಹಿಂಬದಿಯ ಬಾಗಿಲನ್ನು ಹಾಕಿಕೊಳ್ಳದೆ ಬಸ್ ನಿರ್ವಾಹಕನಾದ ಆನಂದ ನಾಯ್ಕ್ ಎಂಬವರು ನಿರ್ಲಕ್ಷತನ ವಹಿಸಿದುದರಿಂದ ಹಾಗೂ ಬಸ್ ಚಾಲಕನಾದ ಶಶಿಧರ ಯು ಆರ್ ಎಂಬವರು ಬಸ್ ಬಾಗಿಲನ್ನು ಹಾಕಿಕೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳದೇ ಬಸ್ಸನ್ನು ಚಲಾಯಿಸಿದ ಪರಿಣಾಮ, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕಡಬ ಗ್ರಾಮದ ನಿವಾಸಿಗಳಾದ ಅಚ್ಯುತ ಗೌಡ (63) ಹಾಗೂ ರುಕ್ಮಯ್ಯ @ ಚಂದ್ರ (36) ಎಂಬವರುಗಳು ಆಯ ತಪ್ಪಿ ಬಸ್ಸಿನ ಹಿಂಬದಿ ಬಾಗಿಲಿನ ಮೂಲಕ ರಸ್ತೆಗೆ ಎಸೆಯಲ್ಪಟ್ಟಿದ್ದು, ಸಾರ್ವಜನಿಕರು ರಸ್ತೆಗೆ ಬಿದ್ದವರನ್ನು ಉಪಚರಿಸಿ ನೋಡಲಾಗಿ ಒಬ್ಬರು ಅಚ್ಯುತಗೌಡ ಎಂಬವರ ಅವರ ತಲೆಗೆ ಗಂಭೀರ ಗಾಯವಾಗಿದ್ದು ಮತ್ತೊಬ್ಬರು ರುಕ್ಮಯ್ಯ (ಚಂದ್ರ) ಎಂಬವರಿಗೆ ತರಚಿದ ಗಾಯಗಳಾಗಿರುತ್ತವೆ.
ಚಿಕಿತ್ಸೆಗಾಗಿ ಅಚ್ಯುತಗೌಡ ರವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 85/2023 ಕಲಂ:279.337.304(A) ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























