ವಿಟ್ಲ : ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಪ್ರಸಕ್ತ ವರ್ಷ 120.19 ಕೋಟಿ ಠೇವಣಾತಿ ಇದ್ದು, ಕಳೆದ ಸಾಲಿಗಿಂತ ಶೇ.4.46 ಏರಿಕೆಯಾಗಿದೆ. 6.79 ಲಕ್ಷ ಸಾಮಾಜಿಕ ಕಾರ್ಯಗಳಿಗೆ ಸದ್ವಿನಿಯೋಗವಾಗಿದೆ ಎಂದು ನಿಯಮಿತದ ಅಧ್ಯಕ್ಷ ಹೆಚ್.ಜಗನ್ನಾಥ ಸಾಲ್ಯಾನ್ ತಿಳಿಸಿದರು.
ಅವರು ವಿಟ್ಲ ಅಕ್ಷಯ ಸಮುದಾಯ ಭವನದಲ್ಲಿ ನಡೆದ 68ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಲೆಕ್ಕಪತ್ರ ವರದಿ ಮಂಡಿಸಿದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ. 2022-23ನೇ ಆರ್ಥಿಕ ಸಾಲಿನಲ್ಲಿ 615.74 ಕೋಟಿ ರೂ.ವ್ಯವಹಾರ ನಡೆದಿದ್ದು, 2.61 ಕೋಟಿ ನಿವ್ವಳ ಲಾಭ ಗಳಿಸಿದೆ. 7525 ಸದಸ್ಯರನ್ನು ಹೊಂದಿರುವ ಸಹಕಾರಿ ಸಂಘ, 2.42 ಪಾಲು ಬಂಡವಾಳ, 67.90 ಹೊರಬಾಕಿ ಸಾಲವಿದ್ದು, ಶೇ.91.54 ಸಾಲ ವಸೂಲಾತಿಯಾಗಿದೆ. ಸಂಘ ಆಡಿಟ್ ವರ್ಗೀಕರಣದಲ್ಲಿ ‘ಎ’ ಶ್ರೇಣಿ ಪಡೆದಿದೆ ಎಂದು ತಿಳಿಸಿದರು.

ಮಹಾಸಭೆಯನ್ನು ಹಿರಿಯ ಸದಸ್ಯರಾದ ವಿಶ್ವೇಶ್ವರ ಭಟ್, ಕೆ.ಎಸ್.ಕೃಷ್ಣ ಭಟ್ ಉದ್ಘಾಟಿಸಿದರು.
ನಿರ್ದೇಶಕರಾದ ಎಂ.ಹರೀಶ್ ನಾಯಕ್, ವಿಶ್ವನಾಥ ಎಂ, ಕೃಷ್ಣ ಕೆ., ಉದಯಕುಮಾರ್ ಎ., ಬಾಲಕೃಷ್ಣ ಪಿ.ಎಸ್, ದಿವಾಕರ ವಿ., ದಯಾನಂದ ಆಳ್ವ, ಸುಂದರ ಡಿ., ಗೋವರ್ಧನ ಕುಮಾರ್, ಶುಭ ಲಕ್ಷ್ಮೀ, ಜಯಂತಿ ಹೆಚ್.ರಾವ್ ಉಪಸ್ಥಿತರಿದ್ದರು.
ಬಿ.ಸಿ.ರೋಡು ಶಾಖಾಧಿಕಾರಿ ಕೆ. ಶ್ರೀನಿಧಿ ಕುಡ್ವ ಪ್ರಾರ್ಥಿಸಿದರು. ನಿರ್ದೇಶಕ ಮನೋರಂಜನ್ ಕೆ.ಆರ್. ನಡಾವಳಿ ಓದಿದರು. ವಿಟ್ಲ ಕಚೇರಿಯ ಸಿಬ್ಬಂದಿ ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಮೋಹನ್ ಕೆ.ಎಸ್. ವಂದಿಸಿದರು.

























