ಪುತ್ತೂರು : ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ಜಂಟಿ ಆಶ್ರಯದಲ್ಲಿ 31ನೇ ವರ್ಷದ ಮಿಲಾದ್ ಸಮಾವೇಶ ಮತ್ತು ವಾಹನ ಜಾಥಾ ಸೆ.28 ರಂದು ಸಂಜೆ ಪುತ್ತೂರಿನಲ್ಲಿ ನಡೆಯಿತು.
ಸಂಜೆ ಕಬಕ ಪೇಟೆಯಿಂದ ಪುತ್ತೂರು ಕಿಲ್ಲೆ ಮೈದಾನದ ತನಕ ನಡೆದ ವಾಹನ ಜಾಥಾವನ್ನು ಕಬಕದಲ್ಲಿ ಟೈಲರ್ ಇಸ್ಮಾಯಿಲ್ ಸಾಹೇಬ್ ಉದ್ಘಾಟಿಸಿದರು.
ಈಸ್ಟರ್ನ್ ಗ್ರೂಪ್ಸ್ ನ ಮಾಲಕ ಖಲಂದರ್ ಧ್ವಜ ಹಸ್ತಾಂತರ ಮಾಡಿ, ಅಬ್ದುಲ್ ಹಮೀದ್ ಬಾಖವಿ ದುವಾ ಆಶೀರ್ವಚನ ನೀಡಿ ವಾಹನ ಜಾಥಾಕ್ಕೆ ಚಾಲನೆ ನೀಡಿದರು.
ಕಬಕ ಜಂಕ್ಷನ್ ಬಳಿಯಿಂದ ಹೊರಟ ಆಕರ್ಷಕ ವಾಹನ ಜಾಥಾವು ಕಬಕ,ಪೋಳ್ಯ, ಮುರ, ನೆಹರುನಗರ, ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವಾಗಿ ದರ್ಬೆ, ಬೈಪಾಸ್ ಮೂಲಕ ತೆರಳಿ ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಂಡಿತು.
ಸುಮಾರು 8 ಕಿ.ಮೀ ತನಕ ನಡೆದ ಈ ಜಾಥಾದಲ್ಲಿ ನೂರಾರು ವಾಹನಗಳಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಅಹಿತಕರ ಘಟನೆಗಳಾಗದಂತೆ ಡಿವೈಎಸ್ಪಿ ಡಾ. ಗಾನಾ ಪಿ.ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು.
ವಾಹನ ಜಾಥಾ ಉದ್ಘಾಟನಾ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ಕೆ.ಬಿ. ಕಾಸಿಂ ಹಾಜಿ ಮಿತ್ತೂರು, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹರ್ಷದ್ ದರ್ಬೆ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾವು, ರಾಜ್ಯ ಸಂಚಾಲಕ ಎಂ.ಪಿ ಅಬೂಬಕ್ಕರ್, ಕೋಶಾಧಿಕಾರಿ ನ್ಯಾಯವಾದಿ ಶಾಕೀರ್ ಹಾಜಿ ಮಿತ್ತೂರು, ಈದ್ ಮಿಲಾದ್ ಸಮಿತಿ ಅಧ್ಯಕ್ಷ ಬಶೀರ್ ಪರ್ಲಡ್ಕ ಸಹಿತ ಹಲವರು ಉಪಸ್ಥಿತರಿದ್ದರು.
ಈದ್ ಮಿಲಾದ್ ಸಮಿತಿ ಕಬಕ ರವರಿಂದ ಪಾನೀಯ ಮತ್ತು ಸಿಹಿ ತಿಂಡಿ ವಿತರಣೆ ನಡೆಯಿತು.