ವಿಟ್ಲ : ಕರೋಪಾಡಿ ಗ್ರಾಮದ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಶಾಲೆಯ ಬಳಿ ಮಾರ್ಬಲ್ ಸಾಗಾಟದ ಲಾರಿ ಪಲ್ಟಿಯಾಗಿ ಮೂವರು ಗಂಭೀರ ಗಾಯಗೊಂಡು, ಓರ್ವ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪವನ ಜಿ. ಶರ್ಮಾ ಎಂಬವರು ನೀಡಿದ ದೂರಿನಂತೆ ಲಾರಿ ಚಾಲಕ ಆದಂ ವಿರುದ್ಧ ಪ್ರಕರಣ ದಾಖಲಾಗಿದೆ.
ಅ.4 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು ಶಾಲೆಯ ಬಳಿರುವಾಗ ಒಡಿಯೂರು ಶಾಲೆಗೆ ಹೋಗುವ ಡಾಮಾರು ರಸ್ತೆಯಲ್ಲಿ ಲಾರಿಯನ್ನು ಅದರ ಚಾಲಕ ಆದಂ ಎಂಬವರು ನಿರ್ಲಕ್ಷತನದಿಂದ ಇಳಿಜಾರು ರಸ್ತೆಯಲ್ಲಿ ಚಲಾಯಿಸಿದ ಪರಿಣಾಮ, ನಿಯಂತ್ರಣ ತಪ್ಪಿ ಒಡಿಯೂರು ದೇವಸ್ಥಾನದ ಪೂರ್ವ ಗೊಪುರದ ಕಟ್ಟಡಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಪರಿಣಾಮ ಗೋಪುರದ ಕಟ್ಟಡಕ್ಕೆ ಹಾನಿಯಾಗಿದ್ದು, ಸುಮಾರು 5 ಲಕ್ಷ ರೂಪಾಯಿ ನಷ್ಟವುಂಟಾಗಿರುತ್ತದೆ.
ಅಪಘಾತದಿಂದಾಗಿ ಲಾರಿಯಲ್ಲಿದ್ದ ಆದಂ, ಅರ್ಷಾದ್ ಪವನ್ ಹಾಗೂ ಶುಭಾಚಂದ್ರ ರವರಿಗೆ ಗಂಭೀರ ಗಾಯವಾಗಿದ್ದು, ಗಾಯಗೊಂಡ ಅರ್ಷಾದ್, ಪವನ್ ಹಾಗೂ ಶುಭಾಚಂದ್ರ ರನ್ನು ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಶುಭಾಚಂದ್ರ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಅರ್ಷಾದ್, ಪವನ್ ರವರಿಗೆ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆಯಲ್ಲಿ ದಾಖಲಿಸಲಾಗಿದೆ. ಗಾಯಗೊಂಡ ಲಾರಿ ಚಾಲಕ ಆದಂ ರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 175/2023 ಕಲಂ: 279,337,338,304(A),427 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























