ಬೆಂಗಳೂರು : ಪ್ರೀತಿಸಿ ಮದುವೆಯಾದರು, ಸುಂದರ ಸಂಸಾರಕ್ಕೆ ಆ ದೇವರು ಕೇವಲ 6 ತಿಂಗಳ ಹಿಂದಷ್ಟೇ ಮುದ್ದಾದ ಮಗುವನ್ನೂ ಕರುಣಿಸಿದ್ದ. ‘ನಮ್ಮದು ಚಿಕ್ಕ ಸಂಸಾರದ ಚೊಕ್ಕ ಸಾಗರ.. ಆನಂದ ಸಾಗರ’ ಅಂತಾ ಗಂಡನ ಪ್ರೀತಿಯನ್ನು ನಂಬಿದ್ದ ಮಹಿಳೆಗೆ ತನ್ನ ಪತಿ ರಾಕ್ಷಸ ಅನ್ನೋದು ಬಹುಶಃ ಕನಸಿನಲ್ಲಿಯೂ ಗೊತ್ತಿರಲಿಲ್ಲವೇನೋ..!
ಹೌದು.. ಅವಳು ಅಂದುಕೊಂಡಿದ್ದೇ ಬೇರೆ.. ಆತ ಮಾಡಿದ್ದೇ ಬೇರೆ. ಯಲಹಂಕ ನ್ಯೂ ಟೌನ್ ಠಾಣೆ ವ್ಯಾಪ್ತಿಯಲ್ಲಿ ಗಂಡನೇ ತನ್ನ ಹೆಂಡತಿಯನ್ನು ಕೊಲೆ ಬಳಿಕ ಆತ್ಮಹತ್ಯೆ ಎಂಬುವಂತೆ ಬಿಂಬಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಂತೋಷ್ ಎಂಬಾತ ಪತ್ನಿ ರೇಖಾಳನ್ನು ಕೊಲೆ ಮಾಡಿದ ಆರೋಪಿ.
ಸಂತೋಷ್ ಮೇಲೆ ಸೈಟ್ ವಿಚಾರವಾಗಿ ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ. ಸಂತೋಷ್ ತನ್ನ ಪತ್ನಿ ರೇಖಾಳನ್ನು ಕೊಲೆ ಮಾಡಿದ ಬಳಿಕ ಸೀರೆಯಿಂದ ಫ್ಯಾನಿಗೆ ನೇತು ಹಾಕಿದ್ದಾನೆ. ಬಳಿಕ ಕುಟುಂಬಸ್ಥರಿಗೆ ಅನುಮಾನ ಬಾರದ ಹಾಗೆ ನಾಟಕ ಆಡಲು ಮುಂದಾಗಿದ್ದಾನೆ.
ರೇಖಾಳನ್ನು ಮನೆಯವರು ಸಂತೋಷ್ಗೆ ಹಣ, ಒಡವೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಸಿಕೊಟ್ಟಿದ್ದರು. ಆದರೆ ಮದುವೆ ಬಳಿಕ ಆಕೆಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ. ಸೈಟ್ ತಗೋಬೇಕು ತವರು ಮನೆಯಿಂದ ಹಣ ತರುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ರೇಖಾ ಒಪ್ಪದಿದ್ದಾಗ ಹಲವು ಬಾರಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ಪ್ರೀತಿಸಿ ಮದುವೆ ಆಗಿದ್ದರು..!
ಈ ಜೋಡಿ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ಶಾಲೆಯಿಂದಲೇ ಪ್ರೇಮಾಂಕುರವಾಗಿ ಸುಮಾರು ನಾಲ್ಕು ವರ್ಷಗಳ ಕಾಲ ಜೋಡಿ ಹಕ್ಕಿಯಾಗಿ ಹಾರಾಡಿದ್ದವು. ನಂತರ ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗಿದ್ದರು.
ಮೂಲತ ತಮಿಳುನಾಡಿನವರಾಗಿದ್ದರೂ ಬೆಂಗಳೂರಿನಲ್ಲೇ ನೆಲೆಸಿದ್ದರು. ಬೆಂಗಳೂರು ಯಲಹಂಕ ನ್ಯೂ ಟೌನ್ನ ಅನಂತಪುರ ಲೇಔಟ್ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. 6 ತಿಂಗಳ ಹಿಂದಷ್ಟೇ ರೇಖಾಗೆ ಮುದ್ದಾದ ಮಗು ಜನಿಸಿತ್ತು. ಕೊಲೆ ಆರೋಪಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ.

























