ಬೆಂಗಳೂರು : ಅರಮನೆ ಮೈದಾನದಲ್ಲಿ ನಡೆಯಲಿರುವ “ಬೆಂಗಳೂರು ಕಂಬಳ-ನಮ್ಮ ಕಂಬಳ”ದ ಕರೆ ಮುಹೂರ್ತ ಹಾಗೂ ಲಾಂಛನ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಿತು.
ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಬೆಂಗಳೂರು ಕಂಬಳದ ಕರೆ ಮುಹೂರ್ತ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದು ನಂತರ ಸಭಾ ಕಾರ್ಯಕ್ರಮ ನೆರವೇರಿತು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಲಾಂಛನ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು ವಿವಿಡೆದೆ ನಡೆಯುವ 20 ಕಂಬಳಕ್ಕೆ ತಲಾ 5 ಲಕ್ಷ ನೀಡುವುದರ ಕುರಿತು ಬಜೆಟ್ ನಲ್ಲಿ ಈಗಾಗಲೇ ಚರ್ಚಿಸಲಾಗಿದ್ದು, ಬೆಂಗಳೂರು ಕಂಬಳಕ್ಕೆ ಸಂಪೂರ್ಣ ಸಹಕಾರ ನೀಡಲು ನಾನು ಬದ್ದ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಜನ ಎಲ್ಲಾ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಈ ಕಂಬಳ ಇತಿಹಾಸದಲ್ಲಿ ದಾಖಲೆ ನಿರ್ಮಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಶಾಸಕ ಅಶೋಕ್ ರೈ, ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷರಾದ ಗುಣರಂಜನ್ ಶೆಟ್ಟಿ ,ಮುರಳೀಧರ್ ರೈ ಮಠಂತಬೆಟ್ಟು, ಸ್ಥಳೀಯ ಶಾಸಕ ಹ್ಯಾರಿಸ್, ಎಂ.ಎನ್.ರಾಜೇಂದ್ರ ಕುಮಾರ್, ಕಂಬಳ ಸಮಿತಿಯ ವಿವಿಧ ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.

























