ಉಳ್ಳಾಲ : ಮುಂಭಾಗದಲ್ಲಿ ಸಂಚರಿಸುತ್ತಿದ್ದ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನಲ್ಲಿದ್ದ ದ್ವಿಚಕ್ರ ವಾಹನವು ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿ ಸವಾರ ಮೃತಪಟ್ಟ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.
ಮೃತ ಸವಾರನನ್ನು ಮೂಲತಃ ಉಳ್ಳಾಲದ ಪ್ರಸ್ತುತ ಕೋಟೆಕಾರ್ನಲ್ಲಿ ನಿವಾಸಿ ಅಝ್ವೀನ್ (21) ಎಂದು ಗುರುತಿಸಲಾಗಿದೆ.
ಮೀನುಗಾರಿಕೆಯ ಕೆಲಸಕ್ಕೆಂದು ತೆರಳುತ್ತಿದ್ದ ಅಝ್ವೀನ್ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಅಝ್ವೀನ್ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಮೀನಿನ ವಾಹನವೊಂದರ ಪ್ಲಾಸ್ಟಿಕ್ ಬಾಕ್ಸ್ ಸಂಚಾರದ ವೇಳೆ ರಸ್ತೆಗೆ ಬಿದ್ದಿದ್ದು, ಬಾಕ್ಸ್ ಹೆಕ್ಕಲೆಂದು ಲಾರಿ ಚಾಲಕ ಹಠಾತ್ತನೆ ಬ್ರೇಕ್ ಹೊಡೆದಿದ್ದಾನೆ. ಹಾಗಾಗಿ ಹಿಂದಿನಲ್ಲಿದ್ದ ದ್ವಿಚಕ್ರ ವಾಹನವು ನಿಯಂತ್ರಣ ಕಳೆದುಕೊಂಡು ಮೀನು ಸಾಗಾಟದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಇದರಿಂದ ಸವಾರ ಅಝ್ವೀನ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಸಮೀಪದ ಆಸ್ಲತ್ರೆಗೆ ದಾಖಲಿಸಲಾಯಿತು. ಪರೀಕ್ಷಿಸಿದ ವೈದ್ಯರು ಸವಾರ ಅಝ್ವೀನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತನಿಖೆ ನಡೆಸಿದ್ದಾರೆ.


























