ಪ್ಯಾಲೆಸ್ಟೈನ್ ನ ಹಮಾಸ್ ಭಯೋತ್ಪಾದನಾ ಸಂಘಟನೆ ಪರವಾಗಿ ಕರ್ನಾಟಕದಲ್ಲಿ ಒಂದು ಸಮುದಾಯ ಪ್ರತಿಭಟನಾ ಮೆರವಣಿಗೆ ನಡೆಸಿ ಸಮಾಜದ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ ಖಂಡಿಸಿದೆ.
ಕರ್ನಾಟಕದಲ್ಲಿ ವಿವಿಧ ಅನ್ಯಕೋಮಿನ ಸಂಘಟನೆಗಳು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನ ಹಮಾಸ್ ಉಗ್ರವಾದಿ ಸಂಘಟನೆಯ ನಡುವೆ ನಡೆಯುತ್ತಿರುವ ಯುದ್ಧದ ವಿಷಯವಾಗಿ ಹಮಾಸ್ ಉಗ್ರವಾದಿ ಸಂಘಟನೆಯ ಪರವಾಗಿ ಎಲ್ಲಾ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟನೆ ಮೆರವಣಿಗೆ ನಡೆಸಲು ಯೋಜಿಸಿದ್ದಾರೆ.
ಭಾರತದಲ್ಲಿ ಇತ್ತೀಚೆಗೆ ಬೇರೆ ಬೇರೆ ಸಂದರ್ಭಗಳಲ್ಲಿ ಶುಕ್ರವಾರದ ನಮಾಜ್ ನಂತರ ನಡೆದ ಪ್ರತಿಭಟನೆಗಳಲ್ಲಿ ಕೋಮುಗಲಭೆಗಳು ನಡೆದಿವೆ. ಮಾತ್ರವಲ್ಲದೆ ಸಾರ್ವಜನಿಕರ ಮೇಲೆ ಹಲ್ಲೆ ಹಾಗೂ ಆಸ್ತಿಪಾಸ್ತಿಗಳನ್ನೂ ಧ್ವಂಸ ಮಾಡಿರುವ ಘಟನೆಗಳು ನಡೆದಿರುತ್ತವೆ. ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಿರುತ್ತದೆ. ಆದ್ದರಿಂದ ಇಂದು ನಡೆಯಬಹುದಾದ ಹಮಾಸ್ ಉಗ್ರವಾದಿಗಳ ಪರವಾದ ಪ್ರಾರ್ಥನೆ ಹಾಗೂ ಇಸ್ರೇಲ್ ನ ದಾಳಿಯ ವಿರುದ್ಧ ನಡೆಯುವ ಪ್ರತಿಭಟನಾ ಮೆರವಣಿಗೆ ಸಮಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳು ನಷ್ಟವಾಗದಂತೆಯೂ ಹಾಗೂ ಸಾರ್ವಜನಿಕರ ಮೇಲೆಯೂ ಹಲ್ಲೆ ದೌರ್ಜನ್ಯಗಳು ನಡೆಯದ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಪೋಲೀಸ್ ಬಂದೋಬಸ್ತನ್ನು ನೀಡಬೇಕೆಂದು ಕರ್ನಾಟಕ ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಕರ್ನಾಟಕ ಹಿಂದೂ ಜಾಗರಣ ವೇದಿಕೆ, ಪ್ರಾಂತ ಸಂಯೋಜಕ್ ದೋ. ಕೇಶವಮೂರ್ತಿ ಆಗ್ರಹಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವುದು ಹಾಗೂ ಪ್ರತಿಭಟನೆಕಾರರನ್ನು ಹದ್ದುಬಸ್ತಿನಲ್ಲಿಡಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದು, ಶುಕ್ರವಾರದ ನಮಾಜಿನ ಬಳಿಕ ನಡೆಯುವ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆಗಳುಂಟಾದಲ್ಲಿ ಅದಕ್ಕೆ ಸರಕಾರ ಹಾಗೂ ಪೊಲೀಸ್ ಇಲಾಖೆಯೇ ನೇರ ಹೊಣೆ ಹೊರಬೇಕಿದ್ದು, ಅಹಿತಕರ ಘಟನೆಗಳು ನಡೆದಲ್ಲಿ ಸಾರ್ವಜನಿಕರ ಪರವಾಗಿ ಹಿಂದು ಜಾಗರಣ ವೇದಿಕೆಯು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.