ಕೊರೊನ ಸೋಂಕು ಹರಡದಂತೆ ತಡೆಯಲು ಸರಕಾರ ಲಾಕ್ ಡೌನ್ ಘೋಷಿಸಿ ಇದಕ್ಕಾಗಿ ಕಟ್ಟುನಿಟ್ಟಿನ ಮಾರ್ಗ ಸೂಚಿಯನ್ನು ಹೊರಡಿಸಿದೆ. ಈ ಎಲ್ಲಾ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲು ಅವಕಾಶವನ್ನು ಕಲ್ಪಿಸಿದೆ.ದಂಡ ವಸೂಲಿ ಮಾಡಲು ದ ಕ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆಗಳಿಗೆ ದ ಕ ಜಿಲ್ಲಾಡಳಿತ ಹೆಸರಿನಲ್ಲಿ ಮುದ್ರಿಸಿರುವ ರಶೀದಿ ಪುಸ್ತಕಗಳನ್ನು ನೀಡಿ ಈ ರಶೀದಿಯ ಮೂಲಕ ಆದೇಶ ಸಂಖ್ಯೆ :ಸಿ ಎ ಎಲ್ ಸಿ ಆರ್ /118/2021 E-135432/ಬಿ2 ದಿನಾಂಕ 23/04/2021 ಪ್ರಕಾರ ದಂಡ ವಸೂಲಿ ಮಾಡಲು ಸೂಚಿಸಿರುತ್ತಾರೆ.
ಕಳೆದ ಹಲವು ದಿನಗಳಿಂದ ನಗರ ಸಭೆಯ ಪೌರಾಯುಕ್ತರ ಆದೇಶದಂತೆ ನಗರಸಭೆಯ ಅರೋಗ್ಯ ಅಧಿಕಾರಿಗಳು ನಗರದ ವಿವಿಧ ಕಡೆ ಮಾರ್ಗ ಸೂಚಿ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿದ್ದು ಆದರೆ ಪುತ್ತೂರು ನಗರಸಭೆಯ ಅಧಿಕಾರಿಗಳು ಈ ರೀತಿ ದಂಡ ವಸೂಲಿ ಮಾಡುವಾಗ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೀಡಿರುವ ಜಿಲ್ಲಾಡಳಿತದ ಹೆಸರಿನ ಅಧಿಕೃತ ರಶೀದಿಗಳನ್ನು ನೀಡದೆ, ನಗರ ಸಭೆಯ ಕಚೇರಿಯ ಹೆಸರಿನಲ್ಲಿ ಪೋರ್ಜರಿ ರಶೀದಿ ನೀಡಿ ಸಾವಿರಾರು ರೂಪಾಯಿ ಹಣ ದುರುಪಯೋಗ ಪಡಿಸಿರುತ್ತಾರೆ ಎಂದು ಎಚ್ ಮಹಮ್ಮದ್ ಆಲಿ ಆರೋಪಿಸಿದ್ದಾರೆ.
ಈ ರಶೀದಿ ಮೂಲಕ ನಗರದ ಹಲವಾರು ಜವಳಿ, ಹೋಟೆಲ್ ಉದ್ಯಮಿಗಳಿಂದ, ಕೆಲವು ವ್ಯಾಪಾರಸ್ಥರಿಂದ ಇದರ ಜತೆಗೆ ಮಾಸ್ಕ್ ಹಾಕದವರಿಗೆಲ್ಲಾ ದಂಡ ವಿಧಿಸಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿದ್ದು, ನಗರಸಭೆಯಲ್ಲಿ ಕೋವಿಡ್ ಹೆಸರಿನಲ್ಲಿ ಇಂಥದ್ದೊಂದು ಗಂಭೀರ ಪ್ರಕರಣ ನಡೆಯುತ್ತಿದೆ, ಕೋವಿಡ್ ನಂತಹ ಈ ಸಂಕಷ್ಟ ಸಂದರ್ಭದಲ್ಲೂ ಹಣ ಮಾಡುವ ನಗರ ಸಭೆ ಸಿಬ್ಬಂದಿಗಳ ವಿರುದ್ದ ಕೇಸ್ ದಾಖಲಿಸ ಬೇಕೆಂದು ನಗರಸಭೆಯ ಮಾಜಿ ವಿಪಕ್ಷನಾಯಕ ಎಚ್. ಮಹಮ್ಮದ್ ಅಲಿ ಆಗ್ರಹಿಸಿದ್ದು ಈ ಕುರಿತು ಸೂಕ್ತ ದಾಖಲೆಗೊಂದಿಗೆ ಜಿಲ್ಲಾಧಿಕಾರಿ ಲಿಖಿತ ದೂರು ನೀಡಲಾಗುವುದು ಎಂದು ಅಲಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಇವರ ಈ ಆರೋಪದ ಬಗ್ಗೆ ಪೌರಾಯುಕ್ತೆ ರೂಪಾ ಶೆಟ್ಟಿ ಜಿಲ್ಲಾಡಳಿತದಿಂದ ರಶೀದಿ ಪುಸ್ತಕ ಬಂದಿರಲಿಲ್ಲ, ಸೀರಿಯಲ್ ನಂಬರ್ ಪ್ರಕಾರ ನಮ್ಮಲ್ಲಿ ನಾವು ರಶೀದಿ ಮಾಡಿ ಕೊಡುತ್ತಿದ್ದವು.. ಯಾರೋ ಕೇಳಿದಾಗಲೂ ಕಟ್ಟಿದ ಚಲನ್ ಬಗ್ಗೆ ನಗರಸಭೆಯಲ್ಲಿ ವಿಚಾರಿಸಲು ಕೂಡಾ ಮುಕ್ತವಾಗಿ ಹೇಳಲಾಗಿತ್ತು. ಅದರಲ್ಲೂ ನಾನೇ ಖುದ್ದಾಗಿ ಇಲ್ಲಿಗೆ ಹೋಗುತ್ತಿಲ್ಲ. ನಮ್ಮ ಆರೋಗ್ಯಾಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಈಗಾಗಲೇ ವಸೂಲಾದ ಎಲ್ಲಾ ಹಣ ಜಮೆಯಾಗಿದ್ದು ಇದನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ, ಆರೋಗ್ಯಾಧಿಕಾರಿಗಳು ಕೂಡಾ ದಂಡ ವಸೂಲು ಹಣವನ್ನು ಕೂಡಲೇ ಪಾವತಿಸುತ್ತಿದ್ದಾರೆ ಹಾಗೂ ಸಂದೇಹಗಳಿದ್ದಲ್ಲಿ ಅವುಗಳಿಗೆ ಉತ್ತರ ನಮ್ಮಲ್ಲಿದೆ.. ಈಗಾಗಲೇ ಒಂದು ಲಕ್ಷದ ಹನ್ನೆರಡು ಸಾವಿರದ ಎಂಟುನೂರು ರೂಪಾಯಿ ಸಂಗ್ರಹವಾಗಿದ್ದು ಈ ಎಲ್ಲಾ ಮಾಹಿತಿಗಳನ್ನು ಯಾರು ಯಾವಾಗ ಬೇಕಾದರೂ ಬಂದು ಪರಿಶೀಲಿಸಬಹುದು, ಈಗಾಗಲೇ ಈ ಬಗ್ಗೆ ದಂಡಕ್ಕೆ ಭಾಜನರಾದವರಿಗೂ ಕಛೇರಿಗೆ ಬಂದು ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಆರೋಪದ ಬಗ್ಗೆ ಉತ್ತರಿಸಿರುವ ಹಿರಿಯ ಆರೋಗ್ಯ ಅಧಿಕಾರಿಗಳಾದ ಶ್ವೇತಾ ಕಿರಣ್ ಅವರು ಕೂಡಾ ಜಿಲ್ಲಾಡಳಿತದ ರಸೀದಿ ಸಿಗದ ಕಾರಣಕ್ಕೆ ರಸೀದಿ ಇಲ್ಲದೆ ದಂಡ ವಸೂಲಿ ಮಾಡುವುದು ತಪ್ಪು ಎಂಬ ಕಾರಣಕ್ಕೆ ತಾತ್ಕಾಲಿಕ ರಶೀದಿ ನೀಡಿ ಚಲನ್ ಪಡೆದುಕೊಳ್ಳಲು ತಿಳಿಸಿದ್ದೆವು. ಹೀಗೆ ವಸೂಲಾದ ಎಲ್ಲಾ ದಂಡಗಳ ಸಂಪೂರ್ಣ ಮಾಹಿತಿ ನಮ್ಮಲ್ಲಿದೆ. ಯಾರು ಯಾವಾಗ ಬೇಕಾದರೂ ಇದನ್ನು ನೋಡಬಹುದು ಅದಲ್ಲದೆ ದಂಡ ಕಟ್ಟಿದವರಿಗೂ ಚಲನ್ ಪಡೆದುಕೊಳ್ಳುವಂತೆ ತಿಳಿಸಲಾಗಿದೆ,ಹಲವು ಮಂದಿ ಕಚೇರಿ ಗೆ ಬಂದು ಚಲನ್ ಪಡೆದುಕೊಂಡಿದ್ದಾರೆ ಇನ್ನೂ ಪಡೆಯದವರ ಚಲನ್ ಕಛೇರಿಯಲ್ಲಿ ಜೋಪಾನವಾಗಿದೆ ಎಂದಿದ್ದಾರೆ.