ಮಂಗಳೂರು : ಕೆಟ್ಟು ನಿಂತಿದ್ದ ಲಾರಿಯಿಂದಾಗಿ 6 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಂಗಳೂರಿನಿಂದ ತೊಕ್ಕೊಟ್ಟಿಗೆ ತೆರಳುತ್ತಿದ್ದ ಲಾರಿಯೊಂದು ಸೇತುವೆಯ ಮಧ್ಯ ಭಾಗದಲ್ಲಿ ಕೆಟ್ಟು ನಿಂತಿತ್ತು. ಈ ವೇಳೆ ಜೋರಾಗಿ ಮಳೆ ಕೂಡ ಸುರಿಯುತ್ತಿದ್ದರಿಂದ ನಿಯಂತ್ರಣ ಕಳೆದುಕೊಂಡು ಆಲ್ಟೋ ಕಾರೊಂದು ಹಿಂಬದಿಯಿಂದ ಲಾರಿಗೆ ಡಿಕ್ಕಿ ಹೊಡೆದಿದೆ.

ಲಾರಿಗೆ ಕಾರು ಡಿಕ್ಕಿಯಾಗಿದ್ದೇ ತಡ ಒಂದರ ಹಿಂದೆ ಇನ್ನೊಂದರಂತೆ ಕಾರಿಗೆ ಹಿಂಬದಿಯಿಂದ ಕಾರು, ಕಾಂಟೆಸ್ಸಾ, ಪಿಕಪ್, ಖಾಸಗಿ ಬಸ್ ಡಿಕ್ಕಿಯಾಗಿವೆ.
ಲಾರಿಗೆ ಡಿಕ್ಕಿ ಹೊಡೆದಿದ್ದ ಅಲ್ಟೋ ಕಾರಿಗೆ, ರಿಟ್ಝ್ ಕಾರು, ಇದಕ್ಕೆ ಹಿಂಬದಿಯಿಂದ ಕಾಂಟೆಸ್ಸಾ ಪಿಕಪ್, ಇದರ ಹಿಂಬಂದಿ ಖಾಸಗಿ ಬಸ್ ಡಿಕ್ಕಿಯಾಗಿದೆ.
ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸರಣಿ ಅಪಘಾತದಿಂದಾಗಿ ಸೇತುವೆ ಮೇಲೆ 2 ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು.

























