ಪುತ್ತೂರು : ರಾಜ್ಯದ ಕಾಂಗ್ರೆಸ್ ಸರಕಾರ ಕಮಿಷನ್ ದಂಧೆಯೊಂದಿಗೆ ಭ್ರಷ್ಟಾಚಾರ ಹಾಗೂ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಖಂಡಿಸಿ ಬಿಜೆಪಿ ವತಿಯಿಂದ ಅಮರ್ ಜವಾನ್ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ಪ್ರಾರಂಭದಲ್ಲಿ ಪಕ್ಷದ ಕಚೇರಿಯ ಬಳಿಯಿಂದ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾನಿರತರು ರಾಜ್ಯ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.
ಪ್ರತಿಭಟನೆಯ ಬಳಿಕ ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಸರಕಾರದ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರದಲ್ಲಿ ಹಣಕ್ಕೆ ಬರವಿದೆ. ಆದರೆ ಸಚಿವರ ಸೂಟ್‌ಕೇಸ್ ಭರಪೂರ ಭರ್ತಿಯಾಗಿದೆ. ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಕೆಲವೇ ತಿಂಗಳಲ್ಲಿ ಜನರು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದ್ದು, ಮುಂದಿನ ನಾಲ್ಕೂವರೆ ವರ್ಷ ಯಾವ ರೀತಿ ಇರಬಹುದು ಎಂದರು.
ಸಿದ್ದರಾಮಯ್ಯ ಆಡಳಿತಕ್ಕೆ ಬಂದರೆ ಬರ, ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಭ್ರಷ್ಟಾಚಾರ ನಿಶ್ಚಿತ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು, ಲಕ್ಷ ಲಕ್ಷ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಈಗ ರಾಜ್ಯದಲ್ಲಿಯೂ ಅಂಥದ್ದೇ ಸ್ಥಿತಿ ನಿರ್ಮಾಣವಾಗಿದ್ದು ಕೋಟ್ಯಾಂತರ ಹಣ ಮಂತ್ರಿಗಳಿಗೆ ಬರುತ್ತಿದೆ ಎಂದು ಹೇಳಿದರು.
























