ನವರಾತ್ರಿ ಉತ್ಸವವನ್ನು ನಾಡಿನೆಲ್ಲೆಡೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 89ನೇ ವರ್ಷದ ನವರಾತ್ರಿ ಉತ್ಸವವು ವಿಜೃಂಭಣೆಯಿಂದ ನಡೆಯುತಲಿದೆ.
ಅ.15 ರಂದು ನವರಾತ್ರಿ ಪೂಜೆ ಪ್ರಾರಂಭಗೊಂಡಿದ್ದು, ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದೆ.
ಅ.20 ರಂದು ಶ್ರೀ ಶಾರದಾ ದೇವಿಯ ಪ್ರತಿಷ್ಠೆ ನಡೆಯಲಿದೆ. ಅ.24 ರಂದು ಶ್ರೀ ಶಾರದಾ ಮೂರ್ತಿಯ ವಿಸರ್ಜನೆ ನಡೆಯಲಿದೆ. ಈ ಬಾರಿ ಶಾರದೋತ್ಸವವು ಬಹಳ ವೈಭವಯುತವಾಗಿ ಮೂಡಿಬರಲಿದೆ.
ಅ.24 ರಂದು ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಕಾರ್ಯಕ್ರಮವನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಉದ್ಘಾಟಿಸಲಿದ್ದು, ಶೋಭಾಯಾತ್ರೆಯ ಸಂಚಾಲಕರಾದ ಸೀತಾರಾಮ ರೈ ಕೆದಂಬಾಡಿಗುತ್ತು ರವರ ನೇತೃತ್ವದಲ್ಲಿ ಬೊಳ್ವಾರು ವೃತ್ತದಿಂದ ವೇದಘೋಷ, ಚೆಂಡೆಮೇಳ, ವಾದ್ಯವೃಂದ, ಕುಣಿತ ಭಜನೆಗಳೊಂದಿಗೆ ಶ್ರೀ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.
ನಾಡಿನ ವಿವಿಧ ಭಾಗಗಳ ಕಲಾ ತಂಡಗಳು ಭಾಗಿ :
ಶೋಭಾಯಾತ್ರೆಯು ಪುತ್ತೂರಿನ ಮುಖ್ಯರಸ್ತೆಯಲ್ಲಿ ತೆರಳಲಿದ್ದು, ನಾಡಿನ ವಿವಿಧ ಭಾಗಗಳಿಂದ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ.
ಕೇರಳ ಚೆಂಡೆ, ಗೊಂಬೆ ಬಳಗ, ಕೀಳು ಕುದುರೆ, ಪೂಜಾ ಕುಣಿತ, ಮಂಡ್ಯ ಡೊಳ್ಳು ಕುಣಿತ, ರಾಮನಗರ ವೀರಭದ್ರ ಕುಣಿತ, ಮಳವಳ್ಳಿ ಪಟದ ಕುಣಿತ, ಮೇಲುಕೋಟೆ ಸೋಮನಕುಣಿತ, ಮಾಗಡಿ ಕಂಸಾಳೆ, ಕೊಳ್ಳೇಗಾಲ ಮಹಿಳಾ ಕೋಲಾಟ, ಮದ್ದೂರು ಹಾಗೂ ಹಲವಾರು ಸ್ಥಬ್ದ ಚಿತ್ರಗಳು ಭಾಗವಹಿಸಲಿವೆ.
ಬೊಳುವಾರಿನಿಂದ ದರ್ಬೆಯ ವರೆಗೆ ಪುತ್ತೂರಿನ ಇತಿಹಾಸದಲ್ಲಿ ಮೊದಲಬಾರಿಗೆ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರಗೊಳ್ಳಲಿದೆ.
80 ತಂಡಗಳು 1400 ಕುಣಿತ ಭಜಕರು, 1200 ನಿತ್ಯ ಭಜಕರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಕಲಾ ಪ್ರದರ್ಶನ ವೀಕ್ಷಣೆಗೆ ಅವಕಾಶ :
ಪ್ರೇಕ್ಷಕರಿಗೆ ಅನುಕೂಲವಾಗಲು ಮುಖ್ಯರಸ್ತೆಯ 13 ಕಡೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೊಳುವಾರು ಸರ್ಕಲ್ (ಆರಂಭಿಕ ಕೇಂದ್ರ ), ಪ್ರಗತಿ, ಮಹಾವೀರ ದ್ವಾರ, ಇನ್ ಲ್ಯಾಂಡ್ ಮಯೂರ, ಶ್ರೀಧರ ಭಟ್ – ಹೆಗ್ಡೆ ಆರ್ಕೆಡ್,, ಜಿ. ಎಲ್ – ಸಂಜೀವ ಶೆಟ್ಟಿ, ಓಲ್ಡ್ ಸಂಜೀವ ಶೆಟ್ಟಿ, ಬಸ್ ನಿಲ್ದಾಣ, ಅರುಣಾ, ಕಲ್ಲಾರೆ, ರಿಲಾಯನ್ಸ್ -ಹರ್ಷ, ದರ್ಬೆ ಸರ್ಕಲ್, ಫಿಲೋಮಿನಾ- ಪರ್ಲಡ್ಕ ಕ್ರಾಸ್ ನಲ್ಲಿ ನಿಂತು ಕಲಾ ಪ್ರದರ್ಶನವನ್ನು ವೀಕ್ಷಿಸುವಂತೆ ಶೋಭಾಯಾತ್ರೆ ಸಂಚಾಲಕರಾದ ಸೀತಾರಾಮ ರೈ ಕೆದಂಬಾಡಿಗುತ್ತು ರವರು ತಿಳಿಸಿದ್ದಾರೆ..



























