ವರುಷ ಕಳೆದಂತೆ ಹೊಸ ಆವಿಷ್ಕಾರಗಳು ವ್ಯವಸ್ಥೆಯಲ್ಲಾಯಿತು, ಆದರೆ ಕನಿಷ್ಠ ಉಳಿಸುವ ಪ್ರಯತ್ನ , ಸಂಸ್ಕಾರ, ಸಂಸ್ಕೃತಿ, ಭಕ್ತಿ ಗೌರವದಲ್ಲಾಯಿತೇ ಎನ್ನುವುದು ಪ್ರಶ್ನೆ. ವಿದ್ಯಾಸಂಸ್ಥೆ ಮಕ್ಕಳಲ್ಲಿ ಸರ್ವವನ್ನೂ ಬೆಳೆಸುವ ದೇಗುಲ. ವಿದ್ಯಾಮಾತೆಯೇ ಅಲ್ಲಿ ರಾರಾಜಿಸುವ ಮಾತೆ. ಪುಸ್ತಕಗಳು, ಅಕ್ಷರಗಳು ಆಕೆಯ ತತ್ ಸ್ವರೂಪ. ಆರಾಧಿಸುವ ಶಾರದಾ ಪೂಜಾ ದಿನದ ನೆನಪು ನಮ್ಮೆಲ್ಲರ ಬಾಲ್ಯದಲ್ಲಿ ಇನ್ನೂ ಹಸಿರಾಗಿಲ್ಲವೇ? ಮನೆಯಿಂದ ತಂದ ಹೂ ಹಣ್ಣುಗಳು ಪ್ರಸಾದವಾಗಿ ತಿಂದು ಸಂಭ್ರಮಿಸಿದ್ದ ಕ್ಷಣ ನೆನೆಗುದಿಯಲ್ಲಿ ನಗುತಿದೆ. ಆದರೆ ಆ ಯೋಗ ನಮ್ಮ ಪುಟಾಣಿಗಳಿಗಿಲ್ಲವೆಂಬ ಖೇದವಿದೆ.ಉಳಿಸುವ ಪ್ರಯತ್ನ ನಮ್ಮದಾಗಬೇಕಿದೆ.
ಈ ನೆಲೆಯಲ್ಲಿ ನವರಾತ್ರಿಯ ಮಧ್ಯೆ ಮೂಲ ನಕ್ಷತ್ರದ ಶುಭ ಶುಕ್ರವಾರ ವಿಠ್ಠಲ್ ಜೇಸಿ ಶಾಲೆಯಲ್ಲಿ ಪುಸ್ತಕಪಾಣಿಯ ಆರಾಧನೆ ಗುರು ಸಮೂಹದಿಂದ ನಡೆಯಿತು. ಸಂಸ್ಥೆಯ ಎಲ್ಲಾ ಗುರು ಗಡಣ, ಆಡಳಿತ ಮಂಡಳಿ ಒಗ್ಗೂಡಿ ಸಂಸ್ಥೆಯ ಶಿಶು ಮಂದಿರ “ಜೇಸಿ ಕುಟೀರ” ದಲ್ಲಿ ಸಂಭ್ರಮಿಸಿತು. ದೀಪ ಬೆಳಗಿಸಿ ಆರಂಭಗೊಂಡ ಭಕ್ತಿಯ ಸಂಕೀರ್ತನೆ ವಿದ್ಯಾದೇಗುಲದ ವಾತಾವರಣವನ್ನು ಶುಭ್ರವಾಗಿಸಿದಂತೆನಿಸಿತು.
ರಾಮಕೃಷ್ಣ ಕಾಟುಕುಕ್ಕೆಯವರ ಸುಶ್ರಾವ್ಯ ಭಕ್ತಿ ನಮನ, ರವಿ ಬಳ್ಳೂರು ಮತ್ತು ತಂಡದ ಹಿಮ್ಮೇಳ ಭಜಕರಿಗೆ ಸ್ಪೂರ್ತಿ ನೀಡಿತ್ತು. ದಸರಾ ರಜಾ ದಿನವಾದ್ದರಿಂದ ಮಕ್ಕಳ ಸಂಖ್ಯೆಯಿಲ್ಲದಿದ್ದುದು ಸ್ವಲ್ಪ ಬೇಸರ ತಂದಿತ್ತಾದರೂ ಮಕ್ಕಳೆಲ್ಲರೀಗೂ ವಿದ್ಯಾಮಾತೆಯ ಅನುಗ್ರಹವಿರಲೆಂದು ಗುರುಗಳೆಲ್ಲರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಂಸ್ಥೆಯ ಅಧ್ಯಕ್ಷ ಎಲ್. ಎನ್. ಕೂಡೂರು, ಕಾರ್ಯದರ್ಶಿ ಮೋಹನ. ಎ, ಆಡಳಿತಾಧಿಕಾರಿ ರಾಧಾಕೃಷ್ಣ. ಎ, ಪ್ರಾಂಶುಪಾಲ ಜಯರಾಮ ರೈ, ಉಪಾಪ್ರಾಂಶುಪಾಲೆ ಜ್ಯೋತಿ ಶೆಣೈ, ಶಿಕ್ಷಕ ಶಿಕ್ಷಕೇತರರು ಭಾಗವಹಿಸಿದರು.ಶಿಕ್ಷಕಿಯರಾದ ಗೀತ ಮತ್ತು ರಶ್ಮಿ ಕಾರ್ಯಕ್ರಮ ಸಂಯೋಜಿಸಿದರು.
🖊️. ರಾಧಾಕೃಷ್ಣ ಎರುಂಬು