ಬಂಟ್ವಾಳ : ರಾತ್ರಿ ವೇಳೆ ಮನೆಗೆ ನುಗ್ಗಿ ಕಳವು ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ನಡೆದಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಕರಕ್ಕಲ್ ನಿವಾಸಿ ಪ್ರವೀಣ್ ಬಂಧಿತ.
ಈತನ ಜೊತೆಗಿದ್ದ ಮತ್ತೋರ್ವ ಪರಾರಿಯಾಗಿದ್ದು, ಕಳ್ಳತನಕ್ಕೆ ಬಳಸುವ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಶನಿವಾರ ರಾತ್ರಿ ಸಾಲೆತ್ತೂರು ಸಮೀಪದ ಮಂಚಿ ಮಸೀದಿ ಬಳಿಯ ಕಮಾರುದ್ದೀನ್ ಹಾಗೂ ಜಲಾಲುದ್ದೀನ್ ಎಂಬ ಸಹೋದರರ ಮನೆಯ ಹಿಂಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿದ ಕಳ್ಳರು ಕಪಾಟುಗಳನ್ನು ಒಡೆದು ಜಾಲಡಿದ್ದಾರೆ.
ಅಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳು ಕೈಗೆ ಸಿಗದೆ ವಾಪಾಸಾಗಿದ್ದಾರೆ. ಅಲ್ಲೇ ಸಮೀಪದ ಹಮೀದ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನ ಒಳಗೆ ಇದ್ದ ಸುಮಾರು 3 ಸಾವಿರ ರೂ. ನಗದು ಕಳವು ಮಾಡಿ ಹೊರಬರುತ್ತಿದ್ದರು. ಈ ವೇಳೆ ಹಮೀದ್ ಮನೆಯ ಇನ್‌ವರ್ಟ್‌ರ್ ಆಫ್ ಮಾಡಲು ಸ್ಥಳೀಯ ಸಂಬಂಧಿಕರೋರ್ವರು ಬಂದಾಗ ಹಮೀದ್ ಮನೆಯ ಕಡೆಯಿಂದ ಇಬ್ಬರು ವ್ಯಕ್ತಿಗಳು ಓಡಿ ಹೋಗಿದ್ದಾರೆ.
ಇದನ್ನು ಗಮನಿಸಿದ ಹಮೀದ್ ಸಂಬಂಧಿ ಕೂಡಲೇ ಸ್ಥಳೀಯರಿಗೆ ತಿಳಿಸಿದ್ದಾರೆ. ಆಗ ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಬೈಕ್ ಬಿಟ್ಟು ಬೇರೆ ಬೇರೆ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ. ಪಟ್ಟು ಬಿಡದ ಸ್ಥಳೀಯರು ಕಳ್ಳರು ಓಡಿಹೋದ ದಿಕ್ಕಿನಲ್ಲಿ ಜಾಲಾಡಿದಾಗ ಓರ್ವ ಕಳ್ಳ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಕಳ್ಳನನ್ನು ಹಸ್ತಾಂತರಿಸಿದ್ದಾರೆ.



























