ಲಕ್ನೋ : ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಕಾಂಪೌಂಡರ್ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ.
ಕಾಂಪೌಂಡರ್ ಶೋಯೆಬ್ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ.
ಡೆಂಗ್ಯೂ ಕಾಯಿಲೆಯಿಂದ ಬಳಲಿ ಸುಸ್ತಾಗಿದ್ದ ಯುವತಿ ರಾತ್ರಿಯಲ್ಲಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಳು. ಆಗ ಕಾಂಪೌಂಡರ್ ಯುವತಿಯ ಬಳಿ ಬಂದು ನಿಂತಿದ್ದಾನೆ. ರಾತ್ರಿಯಾಗಿದ್ದರಿಂದ ಎಲ್ಲ ರೋಗಿಗಳು ಮಲಗಿದ್ದಾಗ ಈ ಘಟನೆ ನಡೆದಿದೆ.
ಯುವತಿ ಮಲಗಿದ್ದಾಗ ಆಕೆಯ ಹಾಸಿಗೆಯ ಪಕ್ಕದಲ್ಲಿ ಕಾಂಪೌಂಡರ್ ನಿಂತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಬಳಿಕ ಆಕೆ ಮೈಮೇಲೆ ಹೊದ್ದು ಕೊಂಡಿದ್ದ ಹಾಸಿಗೆ ಒಳಗೆ ಆರೋಪಿ ಕೈ ಹಾಕಿರುವ ದೃಶ್ಯವೆಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಬಗ್ಗೆ ಆರೋಪಿಯನ್ನು ಹಿಡಿದು ಪ್ರಶ್ನೆ ಮಾಡಿದಾಗ ತಪ್ಪು ಒಪ್ಪಿಕೊಂಡಿದ್ದಾನೆ. ಆಸ್ಪತ್ರೆಯಲ್ಲಿ ಈತನನ್ನು ಎರಡು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಯುವತಿಯ ಕುಟುಂಬಸ್ಥರು ಆರೋಪಿ ವಿರುದ್ಧ ಶೀಘ್ರವೇ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯಿಸಿದ್ದಾರೆ.

























