ಬೆಳ್ತಂಗಡಿ : ತಾಲೂಕಿನ ಉಜಿರೆ ಗ್ರಾಮದ ಕೊಡೆಕಲ್ಲು ಎಂಬಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಅ.29 ರಂದು ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಜಗದೀಶ್(30) ಎಂದು ಗುರುತಿಸಲಾಗಿದೆ. ಈತನ ತಂದೆ ಕೃಷ್ಣಯ್ಯ ಎಂಬಾತನೇ ಕೊಲೆ ಆರೋಪಿ.

ರಾತ್ರಿ ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮಾತಿಗೆ ಮಾತು ಹೆಚ್ಚಾದಾಗ ಕೃಷ್ಣಯ್ಯ ತನ್ನ ಕಪಾಟಿನಲ್ಲಿ ಇರಿಸಿದ್ದ ಚೂರಿಯಿಂದ ಮಗನ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ.
ಇನ್ನು ಘಟನೆ ಬಳಿಕ ಮನೆಯವರು ಸೇರಿ ಜಗದೀಶ್ ನನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಾವನ್ನಪ್ಪಿದ್ದಾನೆ.
ಕೊಲೆ ಮಾಡಿದ ಕೃಷ್ಣಯ್ಯ ನನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

























