ಉಡುಪಿ : ತುಲಾಭಾರ ಸೇವೆಯ ವೇಳೆ ತಕ್ಕಡಿ ಕಳಚಿ ಬಿದ್ದು, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಗಾಯಗೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಪ್ರಸನ್ನಾಭಿನಂದನ ಕಾರ್ಯಕ್ರಮದ ವೇಳೆ ಈ ಅಚಾತುರ್ಯ ನಡೆದಿದೆ.
ಪ್ರಸ್ತುತ ದೆಹಲಿ ಪ್ರವಾಸದಲ್ಲಿರುವ ಸ್ವಾಮೀಜಿ ಅವರು ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಭಕ್ತರು ತುಲಾಭಾರ ಸೇವೆ ಏರ್ಪಡಿಸಿದ್ದರು.
ಭಕ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಕ್ಕಡಿ ಕಳಚಿ ಬಿದ್ದು ಸ್ವಾಮೀಜಿ ಅವರಿಗೆ ತರಚಿದ ಗಾಯಗಳಾಗಿವೆ. ತಕ್ಕಡಿ ಕುಸಿದು ಬೀಳುತ್ತಿದ್ದಂತೆ ಭಕ್ತರು ಆತಂಕಗೊಂಡಿದ್ದರು. ಅದರೇ ಸ್ವಾಮೀಜಿ ಅವರು ಕೈಸನ್ನೆಯ ಮೂಲಕ ತಮಗೆ ಏನೂ ಆಗಿಲ್ಲ ಎಂದು ತಿಳಿಸಿದರು.
ಈ ಘಟನೆಯ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ತುಲಾಭಾರ ಕಾರ್ಯಕ್ರಮದಲ್ಲಿ ತಕ್ಕಡಿ ಕಳಚಿ ಬಿದ್ದಿದೆ. ಎರಡು ದಿನಗಳಲ್ಲಿ ಗಾಯ ಪೂರ್ಣ ಮಾಸಿ ಹೋಗಿದೆ. ಗಾಯದ ಕುರುಹು ಇಲ್ಲದಂತೆ ವಾಸಿಯಾಗಿದೆ. ದೊಡ್ಡ ಗಾಯ ಏನು ಆಗಿಲ್ಲ. ನಾನು ಆರಾಮವಾಗಿದ್ದೇನೆ. ಯಾರೂ ಗಾಬರಿಯಾಗ ಬೇಕಾಗಿಲ್ಲ., ಆತಂಕಕ್ಕೆ ಒಳಗಾಗ ಬೇಕಿಲ್ಲ ಎಂದು ತಿಳಿಸಿದ್ದಾರೆ.

























