ಪುತ್ತೂರು : ಕಲ್ಲೇಗ ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಮೂವರು ಆರೋಪಿಗಳನ್ನು ನಿನ್ನೆ ಕೊಲೆ ನಡೆದ ಸ್ಥಳಕ್ಕೆ ಕರೆ ತಂದು ಮಹಜರು ನಡೆಸಲಾಗಿದ್ದು, ಉಳಿದ ಓರ್ವ ಆರೋಪಿಯನ್ನು ಇಂದು ಘಟನಾ ಸ್ಥಳಕ್ಕೆ ಕರೆ ತಂದು ಮಹಜರು ನಡೆಸಲಾಯಿತು.

ಚೇತನ್, ಮನೀಶ್, ಮಂಜ (ಮಂಜುನಾಥ), ಕೇಶವ ಪಡೀಲು ಬಂಧಿತ ಆರೋಪಿಗಳು.
ನಿನ್ನೆ ಮೂವರು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆ ತಂದು ಸ್ಥಳ ಮಹಜರು ನಡೆಸಿದ್ದು, ಇಂದು ಆರೋಪಿ ಮಂಜ (ಮಂಜುನಾಥ) ನನ್ನು ನೆಹರುನಗರಕ್ಕೆ ಕರೆ ತರಲಾಗಿದ್ದು, ಹತ್ಯೆ ನಡೆಸಿದ ಜಾಗದ ಮಹಜರು ನಡೆಸಲಾಗುತ್ತಿದೆ.
ಪ್ರಕರಣದ ಹಿನ್ನೆಲೆ :
ನ.6 ರಂದು ರಾತ್ರಿ ಪುತ್ತೂರು ನೆಹರೂ ನಗರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಕ್ಷಯ ಕಲ್ಲೇಗ ಹಾಗೂ ಮನೀಶ್, ಚೇತನ್ ಎಂಬವರೊಂದಿಗೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿ ನಡೆದಿದ್ದು, ಸದರಿ ಪ್ರಕರಣ ಮುಂದುವರಿದಂತೆ, ಸ್ವಲ್ಪ ಸಮಯದ ಬಳಿಕ, ಅಕ್ಷಯ್ ಕಲ್ಲೇಗ ತನ್ನ ಗೆಳೆಯನಾದ ವಿಖ್ಯಾತ್ ನೊಂದಿಗೆ, ಪುತ್ತೂರು ನೆಹರೂ ನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡ್ಡಿದಾಗ ಕಾರಿನಲ್ಲಿ ಬಂದ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬುವರುಗಳು ಅಕ್ಷಯ್ ಕಲ್ಲೇಗನೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದ್ದ ಮಾತಿನ ಚಕಮಕಿಯ ವಿಚಾರದಲ್ಲಿ ತಕರಾರು ತೆಗೆದು, ಅವ್ಯಾಚವಾಗಿ ಬೈದು, ತಾವುಗಳು ತಂದಿದ್ದ ತಲವಾರಿನಿಂದ ಹಲ್ಲೆ ನಡೆಸಿರುತ್ತಾರೆ.
ಈ ವೇಳೆ ವಿಖ್ಯಾತ್ ಓಡಿ ತಪ್ಪಿಸಿಕೊಂಡಿದ್ದು, ಅಕ್ಷಯ ಕಲ್ಲೇಗ ರನ್ನು ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ತಲವಾರಿನಿಂದ ಕಡಿದು ಕೊಲೆ ಮಾಡಿದ್ದಾರೆ.

























