ಉಡುಪಿ : ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಮಣಿಪಾಲ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
ಮೃತ ಹಸೀನಾ ಪುತ್ರ, ಹತ್ಯೆಗೀಡಾದ ಮೂವರು ಮಕ್ಕಳ ಸೋದರ ಅಸಾದ್ ಬೆಂಗಳೂರಿನಿಂದ ಆಗಮಿಸಿದ್ದಾರೆ.
ಶವಗಾರಕ್ಕೆ ಬರುತ್ತಿದ್ದಂತೆ ಪುತ್ರ ಕಣ್ಣೀರಿಟ್ಟಿದ್ದಾನೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿರುವ ಪತಿ ನೂರ್ ಮಹಮದ್ ಉಡುಪಿಗೆ ಆಗಮಿಸಲಿದ್ದಾರೆ.
ಮೃತದೇಹವನ್ನು ನೇರವಾಗಿ ಉಡುಪಿಯ ಜಾಮಿಯಾ ಮಸೀದಿಗೆ ತಂದು ಅಂತಿಮ ಪೂಜಾ ವಿಧಿ ವಿಧಾನಗಳು ಅಂತ್ಯಸಂಸ್ಕಾರ ಪ್ರಕ್ರಿಯೆ ನಡೆಯಲಿದೆ. ನಂತರ ಕೋಡಿಬೇಂಗ್ರೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾಲ್ವರನ್ನು ಹತ್ಯೆಗೈದ ಆರೋಪಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ನಾಲ್ಕು ತಂಡಗಳನ್ನು ರಚಿಸಿದ್ದು, ಸುತ್ತಲ ನಾಲ್ಕು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗಕ್ಕೆ ಮಾಹಿತಿ ರವಾನಿಸಿದ್ದಾರೆ.
ಘಟನೆಯಲ್ಲಿ ಗಾಯಕ್ಕೊಳಗಾದ ಅಜ್ಜಿಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

























