ನವದೆಹಲಿ : 16 ವರ್ಷದ ಬಾಲಕನೋರ್ವ ಅಪರಿಚಿತ ಯುವಕನಿಗೆ 60 ಬಾರಿ ಚುಚ್ಚಿ ಕೊಂದಿರೋ ಭೀಕರ ಘಟನೆ ದೆಹಲಿ ಈಶಾನ್ಯ ಭಾಗದಲ್ಲಿ ಬೆಳಕಿಗೆ ಬಂದಿದೆ.
ಬಿರಿಯಾನಿ ತಿನ್ನಲು ಹಣ ಕೊಡಲು ನಿರಾಕರಿಸಿದ್ದಕ್ಕೆ ಅಪರಿಚಿತ ಯುವಕನಿಗೆ ಚಾಕು ಇರಿಯಲಾಗಿದೆ. ಕೊಲೆಯಾದ ಜಾಗದಲ್ಲಿ ಆ ಯುವಕ ಮೃತದೇಹದ ಬಳಿ ಡ್ಯಾನ್ಸ್ ಕೂಡ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆರೋಪಿಯು ನಶೆಯಲ್ಲಿ ಕೊಲೆ ಮಾಡಿದ್ದಾನೆ. ಬಿರಿಯಾನಿ ತಿನ್ನುವ ಆಸೆಗೆ ಅಪರಿಚಿತ ಯುವಕನ ಬಳಿ 350 ರೂಪಾಯಿ ಕೇಳಿದ್ದಾನೆ. ಆತ ಕೊಡಲು ನಿರಾಕರಿಸಿದ್ದಕ್ಕೆ ಜಗಳ ಮಾಡಿದ್ದಾನೆ. ಬಳಿಕ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ನಂತರ ಕತ್ತು ಹಿಡಿದು ಕೊಂದಿದ್ದಾನೆ. ಕುತ್ತಿಗೆ, ಮುಖದ ಭಾಗಕ್ಕೆ ಚೂರಿಯಲ್ಲಿ ಚುಚ್ಚಿದ್ದಾನೆ. ಚೂರಿಯಿಂದ ಇರಿಯುತ್ತಾ ಬಳಿಕ ಆತನನ್ನು ರಸ್ತೆಯುದ್ದಕ್ಕೂ ಎಳೆದೊಯ್ದಿದ್ದಾನೆ. ನಂತರ ತಲೆಗೆ ಒದ್ದಿದ್ದಾನೆ. ಈ ಭೀಕರ ದೃಶ್ಯಗಳೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈಶಾನ್ಯ ಪೊಲೀಸ್ ಉಪ ಆಯಕ್ತರು ಜಾಯ್ ಟರ್ಕಿ ಈ ಬಗ್ಗೆ ಮಾತನಾಡಿದ್ದು, ‘ಮಂಗಳವಾರ ರಾತ್ರಿ 11.15ರ ಸುಮಾರಿಗೆ ಪಿಸಿಆರ್ಗೆ ಕರೆ ಬರುತ್ತದೆ. ಸ್ವಾಗತ ಪ್ರದೇಶದ ಜಂತಾ ಮಜ್ದೂರ್ ಕಾಲೋನಿಯಲ್ಲಿ 16 ವರ್ಷದ ಯುವಕನೋರ್ವ 18 ವರ್ಷದವನನ್ನು ಚಾಕುವಿನಿಂದ ಕೊಂದಿದ್ದಾನೆ’ ಎಂದು ಹೇಳಿದ್ದಾರೆ. ಸಂತ್ರಸ್ತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.


























