ಚಂಡೀಗಢ : ಒಂದು ಶಾಲೆಯ ಪ್ರಿನ್ಸಿಪಾಲ್ ಅಂದ್ರೆ ಕೈ ಮುಗಿದು ಗೌರವಿಸಬೇಕು. ಮಕ್ಕಳು, ಶಿಕ್ಷಕರು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವವರೆ ಪ್ರಾಂಶುಪಾಲರು. ಆ ಶಾಲೆಯ ಶಿಸ್ತು, ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಜವಾಬ್ದಾರಿ ಪ್ರಿನ್ಸಿಪಾಲರ ಮೇಲಿರುತ್ತೆ. ಆದರೆ, ಹರಿಯಾಣದಲ್ಲಿ ಸರ್ಕಾರಿ ಶಾಲೆಯೊಂದರ ಪ್ರಿನ್ಸಿಪಾಲ್, ಒಂದಲ್ಲ, ಎರಡಲ್ಲ 142 ಜನರಿಗೆ ಲೈಂಗಿಕ ಕಿರುಕುಳ ಕೊಟ್ಟ ಕಾಮ ಪಿಶಾಚಿಯಾಗಿದ್ದಾನೆ.
ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಈ ಪ್ರಿನ್ಸಿಪಾಲ್ ವಿರುದ್ಧ ಮೊದಲಿಗೆ 60 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಂತರ ಪ್ರಿನ್ಸಿಪಾಲ್ ವಿರುದ್ಧ ಲೈಂಗಿಕ ಕಿರುಕುಳದ ನೀಡಿದ ವಿದ್ಯಾರ್ಥಿನಿಯರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.
ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಪ್ರಕರಣ
55 ವರ್ಷದ ಪ್ರಾಂಶುಪಾಲರು ನಮ್ಮನ್ನು ತಮ್ಮ ಕಚೇರಿಗೆ ಕರೆದು ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಜಿಂದ್ ಜಿಲ್ಲಾಧಿಕಾರಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಖಚಿತಪಡಿಸಿದ್ದು, ಈ ಕುರಿತು ವಿವಿಧ ಇಲಾಖೆಗಳಿಂದ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ಹರಿಯಾಣ ಪೊಲೀಸರು ಆರೋಪಿ ಪ್ರಾಂಶುಪಾಲರನ್ನು ಬಂಧಿಸಿದ್ದಾರೆ.
ಶಾಲೆಯ ಕೆಲವು ವಿದ್ಯಾರ್ಥಿನಿಯರು ನೀಡಿದ ಪ್ರಾಥಮಿಕ ದೂರನ್ನ ಹರಿಯಾಣ ರಾಜ್ಯ ಮಹಿಳಾ ಆಯೋಗವು ಕಳೆದ ಸೆಪ್ಟೆಂಬರ್ 14ರಂದು ಪೊಲೀಸರಿಗೆ ರವಾನಿಸಿತ್ತು. ಅಕ್ಟೋಬರ್ 30ರಂದು ಈ ಪ್ರಕರಣ ಸಂಬಂಧ ಕ್ರಮ ತೆಗೆದುಕೊಳ್ಳಲಾಗಿತ್ತು. ನಂತರ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಶಿಕ್ಷಣ ಇಲಾಖೆಯು ಆರೋಪಿಯನ್ನು ಅಕ್ಟೋಬರ್ 27 ರಂದು ಅಮಾನತುಗೊಳಿಸಿದೆ.

























