ಕೆದಿಲ : ಗ್ರಾಮದ ಗೋಮಾಳದಲ್ಲಿ ಅಕ್ರಮವಾಗಿ ಮನೆ ಕಟ್ಟಿದ ಪೇರಮೊಗರು ಮೂಲದ ವ್ಯಕ್ತಿಯೋರ್ವರು ಜೆಸಿಬಿ ಮೂಲಕ ಗೋಮಾಳವನ್ನು ಅಗೆಯುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದು, ಅಕ್ರಮವನ್ನು ಅಧಿಕಾರಿಗಳು ನಿಲ್ಲಿಸದಿದ್ದಲ್ಲಿ ಗ್ರಾಮ ಸಮಿತಿಯು ಸ್ಥಳಕ್ಕೆ ತೆರಳಿ ಪ್ರತಿಭಟಿಸುವುದೆಂದು ನಿರ್ಧಾರವಾಗಿದೆ ಎಂದು ತಿಳಿದು ಬಂದಿದೆ.

ಗೋಮಾಳದ ರಕ್ಷಣೆಗಾಗಿ ಈಗಾಗಲೇ ಪೆರಾಜೆ ಹಾಗೂ ಕೆದಿಲ ಗ್ರಾಮಸ್ಥರಿಂದ ಗೋಮಾಳ ಸಂರಕ್ಷಣಾ ಸಮಿತಿ ರಚನೆ ಮಾಡಲಾಗಿದೆ.
ಕೆದಿಲ ಹಾಗೂ ಪೆರಾಜೆ ಗ್ರಾಮದ ಗಡಿ ಪ್ರದೇಶದಲ್ಲಿರುವ ಗಡಿಯಾರ ಸ್ವಾಗತ ನಗರ ಎಂಬಲ್ಲಿ ಇರುವ 14. ಎಕ್ರೆ 56 ಸೆ. ಗೋಮಾಳದ ಜಾಗ ಅಕ್ರಮವಾಗಿ ಒತ್ತುವರಿ ಆಗಿದೆನ್ನಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಈ ಜಾಗವನ್ನು ಅಕ್ರಮವಾಗಿ ಒತ್ತುವರಿ ಗೊಳಿಸಿ, ಅಕ್ರಮ ಶೆಡ್ ಒಂದನ್ನು ನಿರ್ಮಿಸಿದ್ದರು. ಈ ವಿಚಾರವನ್ನು ಹಿಂದೂ ಜಾಗರಣ ವೇದಿಕೆಯು ಖಂಡಿಸಿ ಕಾನೂನು ಬದ್ಧ ಹೋರಾಟಕ್ಕೆ ಪ್ರಾರಂಭಿಸಿತ್ತು. ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಆಧಿಕಾರಿಗಳು ಕಾನೂನು ಪ್ರಕಾರ ಅಕ್ರಮ ಕಟ್ಟಡವನ್ನು ತೆರವುಗೊಳಿಸಿದ್ದರು.

ಜು.27 ರಂದು ಅದೇ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ತೆಂಗಿನ ಗಿಡ ಹಾಗೂ ಇತರೆ ಗಿಡಗಳನ್ನು ನೆಡಲಾಗಿದ್ದು, ಜು.29 ರಂದು ರಾತ್ರಿ ವೇಳೆ ಅದೇ ಸ್ಥಳದಲ್ಲಿ ಅಕ್ರಮವಾಗಿ ಮನೆಯನ್ನು ನಿರ್ಮಿಸಿದ್ದು, ಇದೀಗ ಆ ಸ್ಥಳದಲ್ಲಿ ಜೆಸಿಬಿ ಮೂಲಕ ಅಗೆಯುತ್ತಿರುವ ಕೆಲಸವಾಗುತ್ತಿದೆ ಎಂದು ಗೋಮಾಳ ಸಂರಕ್ಷಣಾ ಸಮಿತಿ ಆರೋಪಿಸಿದೆ.

























