ಡೆಹ್ರಾಡೂನ್ : ಉತ್ತರಕಾಶಿ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹೊರ ಬಂದಿದ್ದಾರೆ. 17 ದಿನದ ಬಳಿಕ ಗಾಳಿ, ಬೆಳಕು ಕಂಡಿರೋ ಕಾರ್ಮಿಕರು ತಮ್ಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಸುರಂಗದಿಂದ ಹೊರ ಬಂದ ಕಾರ್ಮಿಕ ವಿಶ್ವಜಿತ್ ಕುಮಾರ್ ವರ್ಮಾ ಅವರು 17 ದಿನ ತಾವೆಲ್ಲಾ ಹೇಗಿದ್ದೆವು ಅನ್ನೋ ಮಾಹಿತಿಯನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಅವಶೇಷ ಬಿದ್ದಾಗ, ನಮಗೆ ಸುರಂಗದೊಳಗೆ ಸಿಲುಕಿದ್ದು ಅರಿವಾಯಿತು. ಮೊದಲ 10-15 ಗಂಟೆ ನಮಗೆ ಸಾಕಷ್ಟು ಭಯವಾಗಿತ್ತು. ಆದರೆ ನಂತರ ಪೈಪ್ ಅನ್ನು ನಾವು ಇರೋ ಕಡೆಗೆ ಹಾಕಿದ್ದರು ಆಗ ನಮಗೆ ಸ್ವಲ್ಪ ಧೈರ್ಯ ಬಂತು ಎಂದಿದ್ದಾರೆ.
ಪೈಪ್ ಮೂಲಕ ರೈಸ್, ದಾಲ್, ಡ್ರೈ ಪ್ರೂಟ್ಸ್ ನೀಡಿದ್ದರು. ಬಳಿಕ ಮೈಕ್ ಅನ್ನು ಆಳವಡಿಕೆ ಮಾಡಿದ್ದರು. ಇದರಿಂದ ನಾವು ನಮ್ಮ ಕುಟುಂಬದ ಜೊತೆಗೆ ಮಾತನಾಡಲು ಸಾಧ್ಯವಾಯಿತು. ಇದಾದ ಮೇಲೆ ನಾವು ಧೈರ್ಯವಾಗಿ ಹೊರ ಬರೋ ಕಾಲವನ್ನೇ ಎದುರು ನೋಡುತ್ತಿದ್ದೇವು. ಈಗ ನಮಗೆ ಸಂತೋಷವಾಗಿದೆ. ನಾವೀಗ ನಿಜವಾದ ದೀಪಾವಳಿ ಆಚರಿಸುತ್ತೇವೆ ಎಂದು ಕಾರ್ಮಿಕರು ಹೇಳಿದ್ದಾರೆ.
ಇನ್ನು, ಸುರಂಗದೊಳಗಿಂದ ಬಂದ ಕಾರ್ಮಿಕರನ್ನು ಸಂಭ್ರಮದಿಂದ ಬರಮಾಡಿಕೊಂಡ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಚಿನ್ಯಾಲಿಸೌರ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಭೇಟಿ ಮಾಡಿರುವ ಸಿಎಂ ಎಲ್ಲರ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಪ್ರತಿಯೊಬ್ಬರಿಗೂ ಒಂದು ಲಕ್ಷ ರೂಪಾಯಿಯ ಚೆಕ್ ವಿತರಣೆ ಮಾಡಿದ್ದಾರೆ.
ಸುರಂಗದಿಂದ ರಕ್ಷಣೆಯಾದ ಕಾರ್ಮಿಕರನ್ನು ಚಿನೂಕ್ ಹೆಲಿಕಾಪ್ಟರ್‌ನಲ್ಲಿ ಋಷಿಕೇಶ್ ಏಮ್ಸ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿದೆ. ಭಾರತೀಯ ಸೇನೆಯ ಚಿನೂಕ್ ಹೆಲಿಕಾಪ್ಟರ್‌ನಲ್ಲಿ 41 ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.