ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಗೆ ರೂ. 1 ಕೋಟಿ ಅನುದಾನದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಗೊಳ್ಳಲಿದ್ದು, ಮೇ 19ಕ್ಕೆ ಕಾಮಗಾರಿಗೆ ಚಾಲನೆ ನೀಡಲು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಅವರು ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಇಂಜಿನಿಯರೊಂದಿಗೆ ಸ್ಥಳ ಪರಿಶೀಲನೆ ವೇಳೆ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಆಕ್ಸಿಜನ್ ಪ್ಲಾಂಟ್‌ಗೆ ರೂ. 80ಲಕ್ಷ ಅನುದಾನ ನೀಡಿದ ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷರು, ಮ್ಯಾನೆಜಿಂಗ್ ಡೈರೆಕ್ಟರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಶಾಸಕರ ವಾರ್ ರೂಮ್ ಪ್ರಮುಖ್ ಸಾಜ ರಾಧಾಕೃಷ್ಣ ಆಳ್ವ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜರಾಮ್, ಇಂಜಿನಿಯರ್ ಪ್ರಮೋದ್ ಉಪಸ್ಥಿತರಿದ್ದರು.