ಪುತ್ತೂರು : ನಾಪತ್ತೆಯಾಗಿದ್ದ ವ್ಯಕ್ತಿಯೋರ್ವರು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ಪೊಲೀಸರು ತನಿಖೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಬಾಗಲಕೋಟೆ ಮೂಲದ ಸುರೇಶ ಹಾಗೂ ರೇಣವ್ವ ದಂಪತಿಗಳ ಪುತ್ರ, ಪ್ರಸ್ತುತ ಕುಂಬ್ರದ ಮೋಹನ್ ದಾಸ್ ರೈ ಅವರ ಬಳಿ ಜೆಸಿಬಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಹನುಮಂತ (22) ನಾಪತ್ತೆಯಾದ ಯುವಕ.

ಹನುಮಂತ ನಾಪತ್ತೆಯಾದ ಬಗ್ಗೆ ಆತನ ತಾಯಿ ರೇಣವ್ವ ದೂರು ನೀಡಿದ್ದು, ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ವ್ಯಕ್ತಿಗಳ ಬಗ್ಗೆ ಅನುಮಾನವನ್ನು ದೂರಿನಲ್ಲಿ ವ್ಯಕ್ತಪಡಿಸಿದ್ದು, ಈ ಹಿನ್ನೆಲೆ ಅವರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದು, ನಾಪತ್ತೆಯಾದ ಯುವಕ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.
ಹನುಮಂತ ಮಾದ ರವರ ಮಗ ಶಿವಪ್ಪ ಮಾದರ ಎಂಬಾತನು ರೇಣವ್ವ ರವರ ತಮ್ಮನಾದ ಮಂಜುನಾಥರ ಬಳಿ, ‘ನಿನ್ನ ಅಕ್ಕನ ಮಗ ಹನುಮಂತ ನನ್ನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಅವನನ್ನು ಎಲ್ಲಿಗಾದರು ಕಳಿಸು’ ಎಂದು ಹೇಳಿದ್ದು, ಅದರಂತೆ ಹನುಮಂತನನ್ನು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರಿನ ಕುಂಬ್ರದಲ್ಲಿರುವ ಗೆಳೆಯ ಸಂತೋಷ ಗದ್ದಿಗೌಡನ ಹತ್ತಿರ ಕಳಿಸಿದ್ದು, ಈ ಬಗ್ಗೆ ರೇಣವ್ವರಿಗೆ ತಮ್ಮ ಮಂಜುನಾಥ ಪೋನ್ ಕರೆ ಮೂಲಕ ತಿಳಿಸಿದ್ದು, ನ.14 ರಂದು ಮಧ್ಯಾಹ್ನ ಶಿವಪ್ಪನು ಮಂಜುನಾಥನಿಗೆ ಕರೆ ಮಾಡಿ ನಿನ್ನ ಅಕ್ಕನ ಮಗ ಸಿಕ್ಕಿದರೆ ಖಂಡಿತ ಬಿಡುವುದಿಲ್ಲ ಎಂದು ಹೇಳಿ ಅದೇ ದಿನ ಸಂಜೆ ರೇಣವ್ವ ಕುಂಬ್ರದ ಸಂತೋಷನಿಗೆ ಕರೆ ಮಾಡಿದಾಗ, ಶಿವಪ್ಪ, ಹನುಮಪ್ಪ ಮಾದರ, ಮಂಜುನಾಥ ಹನುಮಪ್ಪ ಮಾದರ ಮತ್ತು ದುರ್ಗಪ್ಪ ಮಾದರ ರವರು ವಾಹನದಲ್ಲಿ ಬಂದು ಕುಂಬ್ರದಲ್ಲಿರುವ ನನ್ನ ರೂಮ್ ನಿಂದ ಹನುಮಂತ ನನ್ನು ಪುತ್ತೂರು ಕಡೆಗೆ ಕರೆದುಕೊಂಡು ಹೋಗಿರುವುದಾಗಿ ಸಂತೋಷ ತಿಳಿಸಿದ್ದು, ಕೂಡಲೇ ರೇಣವ್ವ ತಮ್ಮ ಮಂಜುನಾಥನು ವಿಷಯ ತಿಳಿಸಿದ್ದು, ಹನುಮಂತನಿಗೂ ಹಾಗೂ ಶಿವಪ್ಪ, ಮಂಜುನಾಥ, ದುರ್ಗಪ್ಪ ರವರಿಗೂ ಪೋನ್ ಕರೆ ಮಾಡಿದಾಗ ಅವರುಗಳ ಮೊಬೈಲ್ ಸ್ವಿಚ್ ಆಪ್ ಆಗಿದ್ದು, ನಂತರ ರೇಣವ್ವ ಮಗ ಮನೆಗೂ ಬಾರದೇ ಪೋನ್ ಕರೆಗೂ ಸಿಗದೇ ನಾಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಹನುಮಂತನನ್ನು ಪತ್ತೆ ಮಾಡಿ ಶಿವಪ್ಪ, ಮಂಜುನಾಥ, ದುರ್ಗಪ್ಪ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ತಿಳಿಸಿದ್ದಾರೆ.

























