ಬಂಟ್ವಾಳ : ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಡಾಮಾರು ಲೋಡ್ ಮಾಡಿಕೊಂಡು ಬರುತ್ತಿದ್ದ ಟ್ಯಾಂಕರ್ ಗಳಿಂದ ಡಾಮಾರ್ ವರ್ಗಾಯಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ ಘಟನೆ ಬಂಟ್ವಾಳ ತಾಲೂಕು ಕಡೇಶ್ವಾಲ್ಯ ಗ್ರಾಮದ ಅಮೈ ಎಂಬಲ್ಲಿ ನಡೆದಿದೆ.

ಡಿ.8 ರಂದು ರಾತ್ರಿ ಬಂಟ್ವಾಳ ತಾಲೂಕು ಕಡೇಶ್ವಾಲ್ಯ ಗ್ರಾಮದ ಅಮೈ ಎಂಬಲ್ಲಿ, ಎಂ.ಆರ್.ಪಿ.ಎಲ್ ಸಂಸ್ಥೆಯಿಂದ ಡಾಮಾರು ಲೋಡ್ ಮಾಡಿಕೊಂಡು ಬಂದ ಟ್ಯಾಂಕರ್‌ಗಳಿಂದ, ಅಕ್ರಮವಾಗಿ (ಕಳ್ಳತನದ ಮೂಲಕ) ಬೇರೆ ಟ್ಯಾಂಕರ್‌ಗಳಿಗೆ ಡಾಮಾರ್‌ನ್ನು ವರ್ಗಾಯಿಸುತ್ತಿದ್ದಾಗ, ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ್.ಟಿ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿರುತ್ತಾರೆ.

ಈ ವೇಳೆ ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ಉಡುಪಿಯ ವಿಜಯಕುಮಾರ್ ಶೆಟ್ಟಿ ಎಂಬವರ ಸೂಚನೆಯಂತೆ, ಬಂಟ್ವಾಳ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ (ಸುಧಾಕರ ಕೊಟ್ಟಾರಿ) ಎಂಬರೊಂದಿಗೆ ಸೇರಿ ಈ ಕೃತ್ಯವನ್ನು ನಡೆಯುತ್ತಿರುವುದು ಬೆಳಕಿಗೆ ಬಂದಿರುತ್ತದೆ.

ಮುಂದಿನ ಕಾನೂನುಕ್ರಮಕ್ಕಾಗಿ ಸ್ಥಳದಲ್ಲಿದ್ದ ಟ್ಯಾಂಕರ್ ಲಾರಿಗಳನ್ನು, ಡಾಮಾರ್ ಕಳ್ಳತನ ಮಾಡಲು ಉಪಯೋಗಿಸಿದ ತೂಕ ಮಾಪನ -1, ಡಾಮಾರ್ ಬಿಸಿಮಾಡಲು ಉಪಯೋಗಿಸಿದ ಗ್ಯಾಸ್ ಸಿಲಿಂಡರ್ -1, ಡಾಮಾರ್ ತುಂಬಿಸಲು ಬಳಸಿರುವ ಕಬ್ಬಿಣದ ಟ್ಯಾಂಕ್ -1, ಆರೋಪಿಗಳ ವಶದಲ್ಲಿದ್ದ 9 ಮೊಬೈಲ್ ಫೋನುಗಳನ್ನು ಸ್ವಾಧೀನಪಡಿಸಿಕೊಂಡು ವಿಜಯ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ @ಸುಧಾಕರ, ಮಹಮ್ಮದ್ ಇಮ್ರಾನ್, ಅಶ್ರಪ್.ಎ., ವೀರೇಂದ್ರ.ಎಸ್.ಆರ್, ಮಾದಸ್ವಾಮಿ, ಪ್ರಭಾಕರನ್, ನವೀನ್ ಕುಮಾರ್, ಎಂ.ಜಿ., ಮಹಮ್ಮದ್ ನಿಸಾರ್, ಮಹಮ್ಮದ್ ಸಿಹಾಬುದ್ದೀನ್ ಎಂಬವರುಗಳ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 122/2023 ಕಲಂ : 379, 417, 420, 285 ಭಾ.ದ.ಸಂ ಮತ್ತು ಕಲಂ: 23 ಪೆಟ್ರೋಲಿಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























