ನವದೆಹಲಿ : ಸಂಸತ್ ಒಳಗೆ ನುಗ್ಗಿ ಗದ್ದಲ ಸೃಷ್ಟಿಸಿದ ಘಟನೆಗೆ ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರೀ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಇಂದು ಎಂಟು ಮಂದಿ ಲೋಕಸಭಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ರಾಂಪಾಲ್, ಅರವಿಂದ್, ವೀರ್ ದಾಸ್, ಗಣೇಶ್, ಅನಿಲ್, ಪ್ರದೀಪ್, ವಿಮಿತ್ ಮತ್ತು ನರೇಂದ್ರ ಎಂಬುವವರನ್ನು ಲೋಕಸಭಾ ಸೆಕ್ರೇಟರಿ ಅಮಾನತುಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.
ನಿನ್ನೆ ಭದ್ರತಾ ಲೋಪ ಸಂಭವಿಸಿದ ಹಿನ್ನೆಲೆಯಲ್ಲಿ ಇಂದು ಸಂಸತ್‌ಗೆ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಸಂಸತ್ ಮುಂಭಾಗದ ರಸ್ತೆಯಲ್ಲಿ ಹೆಜ್ಜೆ, ಹೆಜ್ಜೆಗೂ ಪೋಲಿಸ್ ಸರ್ಪಗಾವಲು ಹಾಕಲಾಗಿದೆ. ಭದ್ರತೆಯಲ್ಲಿ ಕೇಂದ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದ್ದು, ಇಂದು ಸಾರ್ವಜನಿಕರಿಗೆ ಪ್ರವೇಶ ರದ್ದು ಮಾಡಲಾಗಿದೆ. ಸಂಸದರಾದರೂ ಪಾಸ್ ತೋರಿಸಿದ್ರೆ ಎಂಟ್ರಿ ನೀಡಲಾಗುತ್ತಿದೆ.
ಆರೋಪಿಗಳ ವಿರುದ್ಧ UAPA ಕಾಯ್ದೆಯಡಿ ಕೇಸ್
ಸಂಸತ್ ಒಳಗೆ ನುಗ್ಗಿದ ಹಾಗೂ ಹೊರಗೆ ಆತಂಕ ಸೃಷ್ಟಿಸಿದ ಎಲ್ಲಾ ಆರೋಪಿಗಳ ವಿರುದ್ಧ UAPA ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ.
ಕಾನೂನುಬಾಹಿರ ಸಭೆ ಮತ್ತು ತಡೆಗಟ್ಟುವಿಕೆ ಕಾಯ್ದೆ ಅಡಿ ಕೇಸ್ ದಾಖಲಾದಾಗ ಸುಲಭವಾಗಿ ಜಾಮೀನು ಸಿಗಲ್ಲ. ಈ ಪ್ರಕರಣದ ಆರೋಪಿಗಳಿಗೆ ಹತ್ತು ವರ್ಷದವರೆಗೂ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ. ಇದರ ಜೊತೆಗೆ ದಂಡ ವಿಧಿಸಬಹುದು. ಜೈಲುಶಿಕ್ಷೆ, ದಂಡ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶಗಳಿವೆ.


























