ನವದೆಹಲಿ : ಸಂಸತ್ತಿನಲ್ಲಿನ ಭದ್ರತಾ ವೈಫಲ್ಯ ಸುದ್ದಿ ದೇಶಾದ್ಯಂತ ಸಂಚಲನ ಮೂಡಿಸಿದೆ. ದೆಹಲಿ ಪೊಲೀಸರು ಘಟನೆಯ ತನಿಖೆಯನ್ನು ತೀವ್ರಗೊಳಿಸಿದ್ದು, ಭದ್ರತಾ ಲೋಪ ಪ್ರಕರಣದ ನಂಟು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾಕ್ಕೂ ಹಬ್ಬಿದೆ. ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆಯ ಮಾಸ್ಟರ್ ಮೈಂಡ್ ಎನ್ನಲಾದ ಲಲಿತ್ ಝಾ ದೆಹಲಿ ಪೊಲೀಸರಿಗೆ ಶರಣಾಗಿದ್ದಾನೆ.
ಲಲಿತ್ ಝಾ ಯಾರು.. ಪಾತ್ರವೇನು?
ಕೋಲ್ಕತ್ತಾದ ಮೂಲದ ಲಲಿತ್ ಝಾ ಇಡೀ ಪ್ರಕರಣದ ಪ್ರಮುಖ ಸಂಚುಕೋರನೆಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ತಾನೊಬ್ಬ ಶಿಕ್ಷಕ ಎಂದು ಲಲಿತ್ ಝಾ ಹೇಳಿಕೊಂಡಿದ್ದು, ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ರಿಂದ ಈತ ಪ್ರಭಾವಿತನಾಗಿದ್ದಾನೆ. ಸಂಸತ್ತಿನ ಒಳಗೆ ಪ್ರವೇಶಿಸಲು ಲಲಿತ್ ಝಾಗೆ ಸಾಧ್ಯವಾಗಿರಲಿಲ್ಲ. ಲಲಿತ್ ಝಾ ಸೂಚನೆಯಂತೆ ಹೊಗೆ ಬಾಂಬ್ ಸಿಡಿಸಲು ಇತರೆ ಆರೋಪಿಗಳು ಪ್ಲಾನ್. ಇನ್ನು ಸಂಸತ್ನ ಹೊರಗೆ ಸ್ಮೋಕ್ ಬಾಂಬ್ ಬಳಸುವಾಗ ಈತ ಅದನ್ನು ಚಿತ್ರೀಕರಿಸಿದ್ದ. ಬಳಿಕ ವಾಟ್ಸ್ಪ್ನಲ್ಲಿ ಎನ್ಜಿಓ ಪಾರ್ಟ್ನರ್ಗೆ ದಾಳಿ ವಿಡಿಯೋ ಶೇರ್ ಮಾಡಿದ್ದ. ಘಟನೆ ಬಳಿಕ ತಲೆ ಮರೆಸಿಕೊಂಡಿದ್ದ ಈತನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಕಳೆದ ರಾತ್ರಿ ಲಲಿತ್ ಝಾ ದೆಹಲಿಗೆ ಪೊಲೀಸರಿಗೆ ಶರಣಾಗತಿಯಾಗಿದ್ದಾನೆ.
ನಾಲ್ವರು ಆರೋಪಿಗಳು 7 ದಿನ ಪೊಲೀಸ್ ವಶಕ್ಕೆ
ನೂತನ ಸಂಸತ್ ಭವನದ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳನ್ನು ಏಳು ದಿನಗಳ ಕಾಲ ದೆಹಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ. ಮೈಸೂರಿನ ಮನೋರಂಜನ್ ಸೇರಿದಂತೆ ಎಲ್ಲ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಜೊತೆಗೆ ಭಯೋತ್ಪಾದನಾ ವಿರೋಧಿ ಕಾನೂನು ಆಗಿರುವ ಯುಎಪಿಎ ಅಡಿ ಆರೋಪ ಹೊರಿಸಲಾಗಿದೆ.
ಬಂಧಿತ ನಾಲ್ವರನ್ನು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಹರ್ದೀಪ್ ಕೌರ್ ಅವರ ಮುಂದೆ ಪೊಲೀಸರು ಹಾಜರುಪಡಿಸಿದ್ರು. ಈ ವೇಳೆ, ಆರೋಪಿಗಳನ್ನು 15 ದಿನಗಳ ಕಾಲ ತಮ್ಮ ಕಸ್ಟಡಿಗೆ ಒಪ್ಪಿಸಬೇಕೆಂದು ಪೊಲೀಸರು ಮನವಿ ಮಾಡಿದರು. ಆದರೆ, ನ್ಯಾಯಾಲಯವು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದು, ಪೊಲೀಸರು ಹೆಚ್ಚಿನ ವಿಚಾರಣೆಗೆ ಮುಂದಾಗಿದ್ದಾರೆ.

























