ಬಂಟ್ವಾಳ : ಸಾಕು ನಾಯಿ ಕಚ್ಚಿದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ನಾಯಿಯ ಮಾಲಕ ಮಾರಕಾಯುಧದಿಂದ ಹಲ್ಲೆ ನಡೆಸಿದ ಪ್ರಕರಣ ಕಾವಳಪಡೂರು ಗ್ರಾಮದ ಕಾವಳಕಟ್ಟೆ-ನೆಲ್ಲಿಗುಡ್ಡೆ ಸಮೀಪದ ಬಾರದಬೈಲು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕಾವಳಪಡೂರು ನಿವಾಸಿ ಸಂತೋಷ್ ದೇವಾಡಿಗ ಎಂಬವರು ಬುಧವಾರ ರಾತ್ರಿ ಕಾವಳಕಟ್ಟೆಯಿಂದ ನೆಲ್ಲಿಗುಡ್ಡೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾರಬದಬೈಲು ಎಂಬಲ್ಲಿಗೆ ತಲುಪಿದಾಗ ಸ್ಥಳೀಯ ನಿವಾಸಿ ಶ್ರೀಧರ ಶೆಟ್ಟಿ ಎಂಬವರ ಮನೆಯ ನಾಯಿ ರಸ್ತೆಗೆ ಬಂದು ಸಂತೋಷ್ ಅವರ ಬಲಕಾಲಿಗೆ ಕಚ್ಚಿದೆ ಎನ್ನಲಾಗಿದೆ.

ಈ ಸಂದರ್ಭ ಸಂತೋಷ್ ದೇವಾಡಿಗ ಅವರು ಕಚ್ಚುವ ನಾಯಿಯನ್ನೇಕೆ ರಸ್ತೆಗೆ ಬಿಡುತ್ತೀರಿ ಎಂದು ಪ್ರಶ್ನಿಸಿದ್ದು, ಈ ವೇಳೆ ಶ್ರೀಧರ ಶೆಟ್ಟಿ ಬೈದು ಚೂರಿ ರೀತಿಯ ಕತ್ತಿಯಿಂದ ಸಂತೋಷ್ ದೇವಾಡಿಗ ಅವರ ಮೇಲೆ ಹಲ್ಲೆ ನಡೆಸಿರುತ್ತಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಸಂತೋಷ್ ದೇವಾಡಿಗ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.


























