ಬೆಳ್ತಂಗಡಿ : ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿ ತನ್ನ ಹೆಂಡತಿಯ ಕಣ್ಣನ್ನು ಕಚ್ಚಿ, ಮಾಂಸ ಹೊರಬರುವಂತೆ ಗಾಯಗೊಳಿಸಿದ ವಿಕೃತ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೋಹಿನಿ ಎಂಬ ಮಹಿಳೆಗೆ ಅವರ ಪತಿ ಸುರೇಶ್ ಗೌಡ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.
ನಿನ್ನೆ (ಡಿ.18) ರಾತ್ರಿ ಕಂಠ ಪೂರ್ತಿ ಕುಡಿದು ಮನೆಗೆ ಬಂದ ಸುರೇಶ್ ಗೌಡ, ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಮದ್ಯದ ಅಮಲಿನಲ್ಲಿ ಪತ್ನಿ ಜೊತೆ ಜಗಳವಾಡಿ ಆಕೆಯ ಕಣ್ಣು ಕಚ್ಚಿದ್ದು ನಂತರ ಮುಖದ ಎಡಭಾಗದ ಮಾಂಸ ಕಚ್ಚಿ ತೆಗೆದಿದ್ದಾನೆ. ಪತ್ನಿಯ ಕಣ್ಣು ಮತ್ತು ಮುಖದ ಎಡಭಾಗಕ್ಕೆ ಗಂಭೀರ ಗಾಯಗಳಾಗಿವೆ. ಮತ್ತೊಂದೆಡೆ ಮಗಳ ಮೇಲೂ ಹಲ್ಲೆ ನಡೆಸಿದ್ದು, ಆಕೆಗೂ ಗಾಯಗಳಾಗಿವೆ. ಸದ್ಯ ತಾಯಿ-ಮಗಳನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸುರೇಶ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಸುರೇಶ್ ಗೌಡ (55) ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲಿನ ಮೋಹಿನಿ (55)ಯನ್ನು ಕಳೆದ 22 ವರ್ಷದ ಹಿಂದೆ ಮದುವೆಯಾಗಿದ್ದ. ಶಿಶಿಲದಲ್ಲಿ ಮೋಹಿನಿ ತಂದೆಯವರು ಕೊಟ್ಟ ಜಾಗದಲ್ಲಿ ದಂಪತಿ ವಾಸವಾಗಿದ್ದು, ಸುರೇಶ್ ಕೂಲಿ ಕೆಲಸ ಮಾಡುತ್ತಿದ್ದರು.

























