ಮೈಸೂರು : ಮೌಢ್ಯಕ್ಕೆ ಬಲಿಯಾಗಿ ಬಾಳಿ ಬದುಕ ಬೇಕಾಗಿದ್ದ ಅಕ್ಕನ ಜೀವಕ್ಕೆ ತಮ್ಮ, ತಾಯಿಯೇ ಕುತ್ತು ತಂದ ಘಟನೆ ಚನ್ನರಾಯಪಟ್ಟಣದ ಮಾದೇಹಳ್ಳಿ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಮಮತಾಶ್ರೀ ಎಂಬ ಯುವತಿ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಮಮತಾಶ್ರೀ ಡಿಗ್ರಿ ಮುಗಿಸಿದ್ದು, 4 ತಿಂಗಳ ಹಿಂದೆ ಆಕೆಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಆದರೆ ಕುಟುಂಬದವರು ಮಾತ್ರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ತೋರಿಸದೇ ಜ್ಯೋತಿಷಿ ಮೊರೆ ಹೋಗಿದ್ದಾರೆ.
ಯುವತಿಯ ತಮ್ಮ ಪ್ರಶಾಂತ್ ಆಸ್ಪತ್ರೆಗೆ ಬೇಡ್ವೇ ಬೇಡ ಎಂದು ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾರೆ. ಮೂರು ತಿಂಗಳಿನಿಂದ ಮಂತ್ರವಾದಿಯ ಮಾತು ಕೇಳಿ ಆಸ್ಪತ್ರೆಗೆ ದಾಖಲಿಸದೆ ಸುಮ್ಮನಾಗಿದ್ದಾರೆ.
ಮಂತ್ರವಾದಿ ಮಾತು ನಂಬಿ ಕೊನೆಗೆ ಮಮತಾಶ್ರೀಯನ್ನು ಗೃಹ ಬಂಧನದಲ್ಲಿ ಇರಿಸಿದ್ದಾರೆ. 3 ತಿಂಗಳಿನಿಂದ ಊಟವನ್ನು ನೀಡದೆ, ಅರಿಶಿನ ನೀರು, ನಿಂಬೆ ಹಣ್ಣು ನೀರು ಕುಡಿಸಿದ್ದಾರೆ. ಪರಿಣಾಮ ಆಕೆಯ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡಿದೆ.
ಕೊನೆಗೆ ಕಳೆದ ಒಂದು ತಿಂಗಳ ಹಿಂದೆ ಮಮತಾಶ್ರೀಯನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ. ಈ ವೇಳೆ ಆಕೆಗೆ ಕ್ಯಾನ್ಸರ್ ಇರೋದು ದೃಢವಾಗಿದೆ. ನಾಲ್ಕು ತಿಂಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಿದ್ದರೆ. ಈ ವೇಳೆಗಾಗಲೇ ನಿವಾರಣೆಯ ಹಂತಕ್ಕೆ ಬರುತ್ತಿತ್ತು. ಆದರೆ ಮಂತ್ರವಾದಿಯ ಮಾತು ಕೇಳಿ, ಚಿಕಿತ್ಸೆ ಕೊಡಿಸದೆ ಯುವತಿಯ ತಮ್ಮ, ತಾಯಿ ಆಕೆಯ ಜೀವಕ್ಕೆ ಕುತ್ತು ತಂದಿದ್ದಾರೆ.


























