ನವದೆಹಲಿ : ಪ್ರಸಕ್ತ ಸಾಲಿನಲ್ಲಿ 52,000ಕ್ಕೂ ಅಧಿಕ ಪ್ರಕರಣಗಳನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ಇತ್ಯರ್ಥಪಡಿಸಿದೆ.
ಅಂದರೆ 2023ರಲ್ಲಿ 52,191 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದು, ಇದು ಕಳೆದ ವರ್ಷ ಇತ್ಯರ್ಥಗೊಂಡಿದ್ದ 39,800 ಪ್ರಕರಣಗಳಿಗಿಂತಲೂ ಅಧಿಕವಾಗಿದೆ.ಒಟ್ಟು ತೀರ್ಪು ನೀಡಿದ ಪ್ರಕರಣಗಳಲ್ಲಿ 45,642 ಮಿಸಿಲೇನಿಯಸ್ ಪ್ರಕರಣಗಳು ಮತ್ತು ಸುಮಾರು 6,549 ಸಾಮಾನ್ಯ ಕೇಸ್‌ಗಳು ಸೇರಿವೆ ಎಂದು ಸರ್ವೋಚ್ಚ ನ್ಯಾಯಾಲಯ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮಗ್ರ ಪ್ರಕರಣ ನಿರ್ವಹಣಾ ವ್ಯವಸ್ಥೆಯ ಅಂಕಿ- ಅಂಶಗಳ ಪ್ರಕಾರ ಪ್ರಕರಣ ವಿಲೇವಾರಿ ದರ 6 ವರ್ಷಗಳಲ್ಲಿ ಅತ್ಯಧಿಕವಾಗಿದೆ.
ಪ್ರಕರಣಗಳ ಪರಿಶೀಲನೆ ಮತ್ತು ಪಟ್ಟಿ ಮಾಡುವಿಕೆ ಅವಧಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ಸುವ್ಯವಸ್ಥಿತಗೊಳಿಸಿ 10 ದಿನಗಳಿಂದ ಏಳು ದಿನಗಳಿಗೆ ಇಳಿಸಲಾಯಿತು. ಜೊತೆಗೆ ಹೇಬಿಯಸ್ ಕಾರ್ಪಸ್, ತೆರವು ಪ್ರಕರಣ, ಕಟ್ಟಡ ಧ್ವಂಸ ಪ್ರಕರಣ ಮತ್ತು ನಿರೀಕ್ಷಣಾ ಜಾಮೀನಿನಂತಹ ಕೆಲವು ಪ್ರಕರಣಗಳನ್ನು ಒಂದೇ ದಿನದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ತಕ್ಷಣವೇ ನ್ಯಾಯಾಲಯಗಳಲ್ಲಿ ಪಟ್ಟಿ ಮಾಡಲಾಯಿತು. ನಿರ್ದಿಷ್ಟ ವರ್ಗದ ಪ್ರಕರಣಗಳನ್ನು ನಿರ್ವಹಿಸಲು ವಿಶೇಷ ಪೀಠಗಳನ್ನು ರಚಿಸಲಾಯಿತು, ಇದು ಹೆಚ್ಚು ಪರಿಣಾಮಕಾರಿ ತೀರ್ಪು ಪ್ರಕ್ರಿಯೆಗೆ ಕಾರಣವಾಯಿತು.
ಜನವರಿ 1 2023ರಿಂದ ಡಿಸೆಂಬರ್ 15, 2023ರ ನಡುವೆ 4,410 ಸೇವಾ ಪ್ರಕರಣಗಳು, 11,489 ಕ್ರಿಮಿನಲ್ ಪ್ರಕರಣಗಳು ಹಾಗೂ 10,348 ಸಿವಿಲ್ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.