ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ T2 ಟರ್ಮಿನಲ್ ಯುನೆಸ್ಕೋದ 2023ರ ಪ್ರಿಕ್ಸ್ ವರ್ಸೇಲ್ಸ್ನ ಪ್ರತಿಷ್ಠಿತ ‘2023 World Special Prize for an Interior’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
2022 ನವೆಂಬರ್ 11 ರಂದು ಉದ್ಘಾಟನೆಗೊಂಡ ದೇವನಹಳ್ಳಿ ವಿಮಾನ ನಿಲ್ದಾಣದ ‘ಟರ್ಮಿನಲ್ ಇನ್ ಎ ಗಾರ್ಡನ್’, ‘ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ’ ಒಂದಾಗಿದೆ. T2 ಟರ್ಮಿನಲ್ ಒಟ್ಟು 2,55,661 ಚ.ಮೀ. ಇದ್ದು ಗೋಲ್ಡನ್ ಕಲರ್ನಿಂದ ಅಲಂಕರಿಸಲ್ಪಟ್ಟಿದೆ. ಇದು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವುದರ ಜೊತೆಗೆ ಪರಿಸರ ಸ್ನೇಹಿ ಕೂಡ ಆಗಿದೆ.
ಟರ್ಮಿನಲ್ ಅನ್ನು 4 ಅಡಿಪಾಯದ ಕಂಬಗಳ ಮೇಲೆ ನಿರ್ಮಿಸಲಾಗಿದೆ. ಈ ಟರ್ಮಿನಲ್ ಪರಿಸರದ ಸುಸ್ಥಿರತೆ, ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಆಚರಣೆಯನ್ನು ಈ ಟರ್ಮಿನಲ್‌ನಲ್ಲಿ ಪ್ರತಿಬಿಂಬಿಸಲಾಗಿದೆ. ಇದರ ಒಳಗಡೆ ಸುಂದರ ಗಾರ್ಡನ್ ಇದ್ದು ನೋಡುಗರ ಗಮನ ಸೆಳೆಯುತ್ತದೆ. ಸಂಪೂರ್ಣವಾಗಿ ಸಂಸ್ಕರಿಸಿದ ಬಿದಿರಿನಿಂದ ಸಿಂಗಾರ ಮಾಡಲಾಗಿದೆ. ಹಸಿರಿನ ಸಿರಿ, ಇಟ್ಟಿಗೆ ಗೋಡೆಗಳ ಜೊತೆ ಕೃತಕ ಫಾಲ್ಸ್ ಅನ್ನು ನಿರ್ಮಾಣ ಮಾಡಲಾಗಿದೆ.
ಪ್ರಿಕ್ಸ್ ವರ್ಸೈಲ್ಸ್ 2015ರಲ್ಲಿ ಸ್ಥಾಪಿಸಲಾಗಿದ್ದು ಸಾಂಸ್ಕೃತಿಕ ರಾಯಭಾರಿಯಾಗಿದೆ. ನಾವೀನ್ಯತೆ, ಸೃಜನಶೀಲತೆ, ಸ್ಥಳೀಯ ಪರಂಪರೆ, ಪರಿಸರ ದಕ್ಷತೆ ಮತ್ತು ಸಾಮಾಜಿಕ ಸಂವಹನದ ಮೌಲ್ಯಗಳ ಮೇಲೆ ಗಮನಹರಿಸುತ್ತದೆ. T2 ಅನ್ನು ಟರ್ಮಿನಲ್ ಇನ್ ಎ ಗಾರ್ಡನ್ ಎಂದು ಕೂಡ ಕರೆಯಲಾಗುತ್ತದೆ.