ಪುತ್ತೂರು : ಭಾವನಾತ್ಮಕ ಪರಿಕಲ್ಪನೆಯಡಿಯಲ್ಲಿ ಕಳೆದ 25 ವರ್ಷಗಳಿಂದ ಹತ್ತೂರ ಒಡೆಯನ ಊರಿನಲ್ಲಿ ಸಾರ್ಥಕ ಸೇವೆಯನ್ನು ನೀಡುತ್ತಾ ಬಂದಿರುವ ಆನಂದಾಶ್ರಮ ಇದೀಗ ಬೆಳ್ಳಿ ಬೆಳಕಿನಲ್ಲಿ ಮಿನುಗುತ್ತಿದೆ.
ತಮ್ಮ ಸ್ವಂತ ಮಕ್ಕಳು, ಬಂಧುಗಳನ್ನು ತೊರೆದು ಬಂದವರಿಗೆ ಆ ನೋವಿನ ಛಾಯೆ ಇಲ್ಲದೇ ಸ್ವಂತ ಮನೆಯಲ್ಲಿರುವ ಹಾಗೇ ಇರುವ ಆನಂದಾಶ್ರಮ ಗೌರಿಯಮ್ಮನವರ ಮಾನವ ಪ್ರೀತಿಯ ಧ್ಯೋತಕ ಬಿಂದುವಿಗೆ ಇದೀಗ ಬೆಳ್ಳಿ ಹಬ್ಬದ ಸಂಭ್ರಮ. 25 ವರ್ಷಗಳಲ್ಲಿ ಸರಿಸುಮಾರು 600ಕ್ಕೂ ಮಿಕ್ಕಿ ಜೀವನದ ಸಂಧ್ಯಾಕಾಲವನ್ನು ನೆಮ್ಮದಿಯಿಂದ ಇಲ್ಲಿ ಸಾಗಿಸಿದ್ದಾರೆ.
ಈ ಬೆಳ್ಳಿ ಹಬ್ಬದ ಸಂಭ್ರಮ ಕಾರ್ಯಕ್ರಮ ಡಿ.24 ರಂದು ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರ ಗೌರವ ಉಪಸ್ಥಿತಿಯಲ್ಲಿ ಪುತ್ತೂರಿನ ಜೈನ ಭವನದಲ್ಲಿ ಸಂಪನ್ನಗೊಳ್ಳಲಿದೆ.
ಸಭಾ ಅಧ್ಯಕ್ಷತೆಯನ್ನು ಆನಂದಾಶ್ರಮ ಸೇವಾ ಟ್ರಸ್ಟ್ ನ ಅಧ್ಯಕ್ಷೆ ಡಾ.ಪಿ. ಗೌರಿ ಪೈ ಅವರು ವಹಿಸಿಕೊಳ್ಳಲಿದ್ದಾರೆ.
ಮೇಘ ಫುಡ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಸತ್ಯಶಂಕರ್ ಕೆ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.
ವಿಶೇಷ ಆಹ್ವಾನಿತರಾಗಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.
ಬೆಳ್ಳಿಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ಆಯ್ದ ಅರ್ಹ ಬಡಕುಟುಂಬದವರಿಗೆ ಸರ್ಜಿಕಲ್ ಕಾಟ್, ವ್ಹೀಲ್ ಚಯರ್ ಹಾಗೂ ಇನ್ನಿತರ ಅಗತ್ಯ ಉಪಕರಣಗಳ ವಿತರಣೆಯೂ ನಡೆಯಲಿದೆ.
ಇನ್ನು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಶ್ವೇತಾ ಅರೆಹೊಳೆ ಅವರ ನಿರ್ದೇಶನದಲ್ಲಿ ‘ನೃತ್ಯ ವಲ್ಲರಿ’ ಸಾಂಸ್ಕೃತಿಕ ವೈಭವ ಮೂಡಿಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.