ಪುತ್ತೂರು : ನಗರ ಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ನಾಳೆ (ಡಿ.27) ಉಪಚುನಾವಣೆ ನಡೆಯಲಿದೆ.
ಬಹಳ ಕೂತೂಹಲ ಮೂಡಿಸಿರುವ ನಗರಸಭಾ ಉಪಚುನಾವಣೆಗೆ ಕೆಲ ಗಂಟೆಗಳಷ್ಟೇ ಬಾಕಿಯಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಪುತ್ತಿಲ ಪರಿವಾರದ ಅಭ್ಯರ್ಥಿಗಳು ಪಕ್ಷೇತರರಾಗಿ ಚುನಾವಣಾ ಕಣದಲ್ಲಿದ್ದಾರೆ.
ವಾರ್ಡ್-11 ನೆಲ್ಲಿಕಟ್ಟೆಯ ಉಪಚುನಾವಣೆಯು ಕೊಂಬೆಟ್ಟು ಶಾಲೆಯಲ್ಲಿ ಹಾಗೂ ವಾರ್ಡ್-1 ರಕ್ತೇಶ್ವರಿ ವಠಾರದ ಉಪಚುನಾವಣೆಯು ಸುದಾನಶಾಲೆಯಲ್ಲಿ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ.
ಅಭ್ಯರ್ಥಿಗಳ ವಿವರ :
- ಬಿಜೆಪಿಯಿಂದ ನಗರಸಭೆಯ ವಾರ್ಡ್ 1ರ ಅಭ್ಯರ್ಥಿಯಾಗಿ ಸುನೀತಾ, ನಗರಸಭೆಯ ವಾರ್ಡ್ 11ರ ಅಭ್ಯರ್ಥಿಯಾಗಿ ರಮೇಶ್ ರೈ ಕಣದಲ್ಲಿದ್ದಾರೆ.
- ಕಾಂಗ್ರೆಸ್ ನಿಂದ ನಗರಸಭೆಯ ವಾರ್ಡ್ 1ರ ಅಭ್ಯರ್ಥಿಯಾಗಿ ದಿನೇಶ್ ಶೇವಿರೆ ಹಾಗೂ ನಗರಸಭೆಯ ವಾರ್ಡ್ 11ರ ಅಭ್ಯರ್ಥಿಯಾಗಿ ದಾಮೋದರ ಭಂಡಾರ್ಕರ್ ಕಣದಲ್ಲಿದ್ದಾರೆ.
- ಪುತ್ತಿಲ ಪರಿವಾರದಿಂದ ವಾರ್ಡ್ 11 ರ ಅಭ್ಯರ್ಥಿಯಾಗಿ ಚಿಂತನ್ ಪಿ., ವಾರ್ಡ್ 1 ರ ಅಭ್ಯರ್ಥಿಯಾಗಿ ಅನ್ನಪೂರ್ಣ ಎಸ್.ಕೆ. ಕಣದಲ್ಲಿದ್ದಾರೆ.
ಅಭ್ಯರ್ಥಿಗಳ ನಡುವೆಯೂ ತೀವ್ರ ಪೈಪೋಟಿ ಇದ್ದು, ಯಾರು ಗೆಲುವಿನ ನಗೆ ಬೀರಲಿದ್ದಾರೆ ಎಂದು ಕಾದು ನೋಡಬೇಕಿದೆ.
ನಾಳೆ (ಡಿ.27) ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದ್ದು, ಅವಶ್ಯವಿದ್ದರೆ ಡಿ.29ರಂದು ಮರುಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ನಗರ ಸಭಾ ವ್ಯಾಪ್ತಿ ಹಾಗೂ ಉಪ ಚುನಾವಣೆ ನಡೆಯುವ ವಾರ್ಡ್ ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಡಿ.8 ರಿಂದ 30 ರ ತನಕ ಜಾರಿಯಲ್ಲಿರಲಿದೆ.

























