ಬಂಟ್ವಾಳ : ಕಾರು ಡಿಕ್ಕಿ ಹೊಡೆದ ಹಿನ್ನೆಲೆ ಯುವತಿ ಮೃತಪಟ್ಟ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದೆ.
ಬಂಟ್ವಾಳ ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಸ್ತೆ ಬದಿಯಲ್ಲಿ ತಾಯಿ ಮಗಳು ನಡೆದುಕೊಂಡು ಹೋಗುತ್ತಿರುವಾಗ ಕಾರನ್ನು ಅದರ ಚಾಲಕ ಅತೀ ವೇಗದಿಂದ ನಿರ್ಲಕ್ಷ್ಯದ ಚಾಲನೆ ಮಾಡಿ ಯುವತಿಗೆ ಡಿಕ್ಕಿ ಹೊಡೆದು ಬಳಿಕ ರಸ್ತೆ ಬದಿಯ ಮನೆ ಕಾಂಪೌಂಡಿಗೆ ಡಿಕ್ಕಿ ಹೊಡೆದು ತಂತಿ ಕಂಬಕ್ಕೂ ಗುದ್ದಿದ್ದು, ಮದುವೆ ನಿಶ್ಚಯವಾಗಿದ್ದ ಚೈತ್ರ ಎಂಬ ಯವತಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆ.
ವಾಹನದಲ್ಲಿದ್ದ ಚಾಲಕ ಸಹಿತ ಸಹಪ್ರಯಾಣ ಮಾಡುತ್ತಿದ್ದ ಎಲ್ಲರೂ ಸ್ಥಳದಿಂದ ಅಪಘಾತವಾದ ಕೂಡಲೇ ಪರಾರಿಯಾಗಿದ್ದು, ಇದೊಂದು ಗಾಂಜಾ ವ್ಯಸನಿಗಳ ತಂಡವಾಗಿದೆ ಎಂದು ಆರೋಪಿಸಿದ್ದಾರೆ.
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಪರಿಸರದಲ್ಲಿ ಸರಣಿ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಗಾಂಜಾದ ಅಮುಲು ಬಂಟ್ವಾಳ ತಾಲೂಕಿನಲ್ಲಿ ಘಮಘಮಿಸುತ್ತಿದ್ದು ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ಹುಟ್ಟು ಹಾಕಿದೆ. ಈ ಎಲ್ಲಾ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಖಂಡಿಸಿದ್ದು, ಸರಣಿ ಕಳ್ಳತನ ಮತ್ತು ಗಾಂಜಾ ತಂಡಗಳನ್ನು ಪೊಲೀಸ್ ಇಲಾಖೆ ಜಿಲ್ಲಾಡಳಿತ ಬಂಧಿಸಿಬೇಕೆಂದು ಆಗ್ರಹಿಸಿದೆ.


























