ಮುಕ್ಕೂರು : ಹದಿನೈದು ವರ್ಷಗಳ ಬಳಿಕ ನಡೆದ ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ನಡೆದು ಊರು ಪರವೂರಿನಲ್ಲಿ ಒಂದು ಮಾದರಿ ಕಾರ್ಯಕ್ರಮವಾಗಿ ಮೂಡಿ ಬಂದಿದೆ. ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ಸರ್ವರೂ ಅಭಿನಂದನೆಗೆ ಅರ್ಹರು ಎಂದು ಪ್ರಗತಿಪರ ಕೃಷಿಕ, ವಾರ್ಷಿಕೋತ್ಸವದ ವೇದಿಕೆ ಮತ್ತು ಪ್ರಚಾರ ಸಮಿತಿ ಸಂಚಾಲಕ ಮೋಹನ ಬೈಪಡಿತ್ತಾಯ ಹೇಳಿದರು.

ಜ.2 ರಂದು ಮುಕ್ಕೂರು ಶಾಲಾ ಸಭಾಂಗಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರೀಡಾಕೂಟದ ಲೆಕ್ಕಾಚಾರ ಮಂಡನೆ ಹಾಗೂ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ರಾಜಕೀಯ, ಜಾತಿ, ಧರ್ಮದ ಬೇಧವಿಲ್ಲದೆ ಕಾರ್ಯಕ್ರಮ ಸಂಘಟಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನುವುದಕ್ಕೆ ಮುಕ್ಕೂರು ಶಾಲಾ ವಾರ್ಷಿಕೋತ್ಸವ ಒಂದು ಉದಾಹರಣೆ. ತನ್ನ ಊರ, ತಾನು ಕಲಿತ ಶಾಲೆ ಎಂಬ ಅಭಿಮಾನದಿಂದ ಭಾಗವಹಿಸಿದ ಸರ್ವರೂ ಈ ಯಶಸ್ಸಿಗೆ ಪಾಲುದಾರರು ಎಂದರು.

ನಿರೀಕ್ಷೆಗೂ ಮೀರಿ ಯಶಸ್ಸು
ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಹಾಗೂ ವಾರ್ಷಿಕೋತ್ಸವದ ಆರ್ಥಿಕ ಸಮಿತಿ ಸಂಚಾಲಕ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಶಾಲೆ ಕಟ್ಟಿದ ಹಿರಿಯರ ಸಲಹೆ, ಕಿರಿಯರ ಸಹಕಾರ ಪಡೆದು ವಾರ್ಷಿಕೋತ್ಸವ ಆಚರಣೆಗೆ ಮುಂದಡಿ ಇಟ್ಟಿದ್ದೇವು. ನಮ್ಮ ನಿರೀಕ್ಷೆಗೂ ಮೀರಿ ತನು, ಮನ, ಧನದ ಸಹಕಾರ ನೀಡುವ ಜತೆಗೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಒಟ್ಟು ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದ್ದಾರೆ. ಇದಕ್ಕಾಗಿ ದುಡಿದ ಪೋಷಕರು, ಶಿಕ್ಷಕರು, ಊರವರು, ಹಳೆ ವಿದ್ಯಾರ್ಥಿಗಳು, ಸಂಘಟನೆಯ ಸದಸ್ಯರ ಪರಿಶ್ರಮ ಸ್ಮರಣೀಯ ಎಂದರು.

ದಾಖಲೆ ಸೃಷ್ಟಿ
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಹಾಗೂ ವಾರ್ಷಿಕೋತ್ಸವದ ಆರ್ಥಿಕ ಸಮಿತಿ ಸಂಚಾಲಕ ಉಮೇಶ್ ಕೆಎಂಬಿ ಮಾತನಾಡಿ, ಇಡೀ ವಾರ್ಷಿಕೋತ್ಸವ ಅತ್ಯಂತ ಅಚ್ಚುಕಟ್ಟಾಗಿ ನಡೆದಿದೆ. ಯಾವ ಲೋಪವಿಲ್ಲದೆ ಅತಿಥಿ ಸತ್ಕಾರ ಆಗಿದೆ. ಮುಕ್ಕೂರಿನ ಇತಿಹಾಸದಲ್ಲಿ ಈ ಕಾರ್ಯಕ್ರಮ ದಾಖಲೆ ಬರೆದಿದೆ. ಇದು ಸಂಘಟಿತ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ ಎಂದ ಅವರು ಇದರ ಹಿಂದೆ ದುಡಿದ ಎಲ್ಲರಿಗೂ ಯಶಸ್ಸು ಅರ್ಪಿಸೋಣ ಎಂದರು.

ಸ್ಮರಣೀಯ ಕಾರ್ಯಕ್ರಮ
ಇಂಜಿನಿಯರ್ ನರಸಿಂಹ ತೇಜಸ್ವಿ ಕಾನಾವು ಮಾತನಾಡಿ, ಕ್ರೀಡಾಕೂಟದಿಂದ ತೊಡಗಿ ವಾರ್ಷಿಕೋತ್ಸವ ತನಕ ಇಡೀ ಕಾರ್ಯಕ್ರಮ ಸುಂದರವಾಗಿ ಮೂಡಿ ಬಂದಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ನನ್ನ ಪಾಲಿಗೆ ದೊರೆತದ್ದು ಸ್ಮರಣೀಯ. ನಮ್ಮ ಶಾಲೆ ಎಂಬ ಅಭಿಮಾನ ಇದ್ದಾಗ ಮಾತ್ರ ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗುತ್ತದೆ ಅನ್ನುವುದಕ್ಕೆ ಮುಕ್ಕೂರು ಶಾಲಾ ಕಾರ್ಯಕ್ರಮ ಸಾಕ್ಷಿಯಾಗಿ ನಿಂತಿದೆ ಎಂದರು.
ಅಪೂರ್ವ ಅವಕಾಶ
ಸಭಾಧ್ಯಕ್ಷತೆ ವಹಿಸಿದ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಜಯಂತ ಗೌಡ ಮಾತನಾಡಿ, ಎಸ್ಡಿಎಂಸಿ ಅಧ್ಯಕ್ಷನಾಗಿ ಶಾಲೆಯಲ್ಲಿ ಅಪೂರ್ವವಾದ ಕಾರ್ಯಕ್ರಮ ಸಂಘಟಿಸುವ ಅವಕಾಶ ನನ್ನ ಪಾಲಿಗೆ ಸಿಕ್ಕಿದ್ದು ಸೌಭಾಗ್ಯ ಎಂದು ಭಾವಿಸುವೆ. ಶಾಲಾ ಪೋಷಕರು ಮನೆ ಮನೆಗೆ ತೆರಳಿ ಆಮಂತ್ರಣ ಪತ್ರಿಕೆ ವಿತರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮುಖ್ಯಗುರು ಹಾಗೂ ಶಿಕ್ಷಕ ವೃಂದ, ಊರ ದಾನಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಪೂರ್ವಭಾವಿ ಸಭೆಗೆ ಊರ ಪ್ರಮುಖರು ಆಗಮಿಸಿ ಸಲಹೆ ಸೂಚನೆ ನೀಡಿದಲ್ಲದೆ ಆರ್ಥಿಕ ಕ್ರೋಢಿಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ನೇಸರ ಯುವಕ ಮಂಡಲ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸದಸ್ಯರು ಮೂರು ದಿನ ಪೂರ್ತಿಯಾಗಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ಊರ ದೇವಾಲಯದಂತಿರುವ ಶಾಲೆಯ ವಾರ್ಷಿಕೋತ್ಸವ ಅತ್ಯದ್ಭುತ ರೀತಿಯಲ್ಲಿ ಸಂಘಟಿಸುವಲ್ಲಿ ಶ್ರಮಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು ಎಂದರು.
ಶಾಲಾ ಮುಖ್ಯಗುರು ಅರವಿಂದ ಕಜೆ, ಹಿರಿಯ ಶಿಕ್ಷಕಿ ಲಲಿತಾ ಕುಮಾರಿ ಅವರು ಮಾತನಾಡಿ, ಒಂದು ತಂಡವಾಗಿ ಕೆಲಸ ನಿರ್ವಹಿಸಿ ವೈಭವದಿಂದ ವಾರ್ಷಿಕೋತ್ಸವ ನೆರವೇರಿಸಿ ಧನಾತ್ಮಕ ಸಂದೇಶ ರವಾನಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಶಾಲಾ ಹಿತಚಿಂತನ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಮಾತನಾಡಿ, ವಾರ್ಷಿಕೋತ್ಸವ ಸಂಘಟನೆಯ ಬಗ್ಗೆ ಊರಿನಿಂದ ಮಾತ್ರವಲ್ಲದೆ ಪರವೂರಿನಿಂದಲೂ ಪ್ರಶಂಸೆ ವ್ಯಕ್ತವಾಗಿದೆ ಎಂದರು.
ಪೋಷಕರ ಪರವಾಗಿ ಎಸ್ಡಿಎಂಸಿ ಉಪಾಧ್ಯಕ್ಷೆ ಸುಮತಿ ರೈ ಕೊಂಡೆಪ್ಪಾಡಿ, ಪ್ರಸಾದ್ ನಾಯ್ಕ ಕುಂಡಡ್ಕ ಅನಿಸಿಕೆ ವ್ಯಕ್ತಪಡಿಸಿ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಪ್ರಭಾರ ಮುಖ್ಯಗುರು ಅರವಿಂದ ಕಜೆ ನಿರೂಪಿಸಿದರು. ಪೋಷಕರು ಉಪಸ್ಥಿತರಿದ್ದರು.



























