ಪುತ್ತೂರು : ತಾಲೂಕು ಪಂಚಾಯತ್ ನ ವಾಣಿಜ್ಯ ಸಂಕೀರ್ಣದ ಕೊಠಡಿಯೊಂದನ್ನು ಬಾಡಿಗೆ ಪಡೆದುಕೊಂಡವರು ಬಾಡಿಗೆ ಪಾವತಿಸದೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದೂರು ನೀಡಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ನೀಡಿರುವ ದೂರಿನ ಮೇರೆಗೆ ಬಪ್ಪಳಿಗೆ ನಿವಾಸಿ ರಾಜ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕು ಪಂಚಾಯತ್‌ನ ವಾಣಿಜ್ಯ ಸಂಕೀರ್ಣ -2 ರ ಕೊಠಡಿ ಸಂಖ್ಯೆ 3 ನ್ನು, ಹೇಮಲತಾ ಕೋಂ. ರಾಜ ಎಂಬವರಿಗೆ ಈ ಹಿಂದೆ ಬಾಡಿಗೆಗೆ ನೀಡಲಾಗಿದ್ದು, ಸದ್ರಿಯವರು ಬಾಡಿಗೆಯನ್ನು ದೀರ್ಘ ಕಾಲದಿಂದ ಬಾಕಿ ಇರಿಸಿಕೊಂಡ ಹಿನ್ನೆಲೆಯಲ್ಲಿ, ನಿಯಮಾನುಸಾರ ಸದ್ರಿ ಕೊಠಡಿಗೆ ಬೀಗ ಮುದ್ರೆ ಹಾಕಿ ಮರು ಏಲಂಗಾಗಿ ಪ್ರಕಟಣೆಯನ್ನು ಪ್ರಚಾರಪಡಿಸಿರುತ್ತಾರೆ.
ಸದ್ರಿ ಪ್ರಕಟಣೆಯ ಪ್ರತಿಯನ್ನು ಕೊಠಡಿಯ ಬಾಗಿಲಿಗೆ ಅಂಟಿಸಲಾಗಿದ್ದು, ಕೊಠಡಿಯ ಬಾಡಿಗೆದಾರರಾದ ಮಹಿಳೆಯ ಪತಿ ರಾಜ ಎಂಬವರು, ಜ.2 ರಂದು ಮದ್ಯಾಹ್ನ ಕಛೇರಿಯ ಏಲಂ ಪ್ರಕಟಣೆಯ ನೋಟೀಸನ್ನು ಕಿತ್ತು ತೆಗೆದು ತಾಲೂಕು ಪಂಚಾಯತ್ ಕಛೇರಿಗೆ ಅಕ್ರಮ ಪ್ರವೇಶಿಸಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿರುವಾಗ ಉದ್ದಟತನದಲ್ಲಿ ವರ್ತಿಸಿ ಬಾಡಿಗೆ ಪಡೆದ ಕೊಠಡಿಯು ತನ್ನದೆಂದು ಗದರಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 01/2024 ಕಲಂ: 353 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























