ಪುತ್ತೂರು : ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯ ಕೇಂದ್ರಕ್ಕೆ ತಲಾ 20 ಲಕ್ಷ ರೂ. ಅನುದಾನವನ್ನು ಹೆಚ್ಚುವರಿಯಾಗಿ ನೀಡುವುದಾಗಿ ಶಾಸಕರು ಘೋಷಿಸಿದರು.
ಪ್ರತೀ ವಲಯಾಧ್ಯಕ್ಷರುಗಳ ಮೂಲಕ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲಿದೆ. ಗ್ರಾಮದಲ್ಲಿ ಅಗತ್ಯವಾಗಿ ಆಗಬೇಕಾದ ಕಾಮಗಾರಿಯನ್ನು ಮಾಡಲು ಈ ಅನುದಾನವನ್ನು ಬಳಕೆ ಮಾಡಲಾಗುತ್ತದೆ. ಪ್ರತೀ ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಅನುದಾನವನ್ನು ವಿತರಣೆ ಮಾಡಲಾಗುತ್ತದೆ. ಕಾರ್ಯಕರ್ತರು ಯಾವುದೇ ಸಮಸ್ಯೆ ಇದ್ದರೂ ಶಾಸಕರ ಕಚೇರಿಗೆ ಬನ್ನಿ. ಪಕ್ಷ ಕಟ್ಟುವಲ್ಲಿ ಆಗಿರುವ ಸಮಸ್ಯೆಗಳನ್ನು ನನ್ನ ಗಮನಕ್ಕೆ ತನ್ನಿ. ಪಕ್ಷ ಕಟ್ಟಲು ಏನು ಸಹಕಾರ ಬೇಕು ಎಂಬುದನ್ನು ನೇರವಾಗಿ ತಿಳಿಸಿ. ಸರಕಾರದ ಗ್ಯಾರಂಟಿ ಯೋಜನೆಗಳು ಪ್ರತೀ ಮನೆಗೂ ತಲುಪುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು. ಗೃಹಲಕ್ಷ್ಮಿ ಯಾರಿಗೆ ಬಂದಿಲ್ಲವೋ ಅಂಥವರಿಗೆ ತಲುಪಿಸುವ ವ್ಯವಸ್ಥೆಯನ್ನು ಕಾರ್ಯಕರ್ತರು ಮಾಡಬೇಕು. ಪಕ್ಷದ ಬಲವರ್ಧನೆಗೆ ಗ್ಯಾರಂಟಿ ಯೋಜನೆಗಳು, ಅಕ್ರಮ ಸಕ್ರಮ, 94 ಸಿ ಮತ್ತು ಸಿ ಸಿ ವಿತರಣೆಯಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ಅರ್ಹ ಎಲ್ಲರಿಗೂ ಹಕ್ಕುಪತ್ರವನ್ನು ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.
ಕಾರ್ಯಕರ್ತರ ಮೂಲಕವೇ ಅಭಿವೃದ್ದಿ ಕೆಲಸ
ಕಾರ್ಯಕರ್ತರ ಮೂಲಕವೇ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತದೆ. ವಿವಿಧ ತಂಡಗಳನ್ನು ಮಾಡಿ ಎಲ್ಲಾ ಗ್ರಾಮದಲ್ಲಿ ಬೂತ್ ಮತ್ತು ಮಹಿಳಾ ತಂಡವನ್ನು ಕಟ್ಟುವ ಕೆಲಸ ಆಗಬೇಕು ಎಂದು ಹೇಳಿದ ಶಾಸಕರು ಕಾರ್ಯಕರ್ತರೇ ಪಕ್ಷದ ಆಧಾರ ಸ್ತಂಬ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ, ಪಕ್ಷದ ಬಲವರ್ಧನೆಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು. ವಲಯ ಹಾಗೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಬಗ್ಗೆ ಮಾಹಿತಿ ನೀಡಿದರು. ತಿಂಗಳಲ್ಲಿ ಎರಡು ದಿನ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕರು ಅಹವಾಲು ಸ್ವೀಕರಿಸಬೇಕು. ಕಾರ್ಯಕರ್ತರ ಭಾವನೆಗೆ ಧಕ್ಕೆತರುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದರು.


























