ಬೆಂಗಳೂರು : ನಾಲ್ಕು ವರ್ಷದ ಮಗನನ್ನು ತಾಯಿಯೇ ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸಿರುವ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಭಯಾನಕ ಕೃತ್ಯಕ್ಕೆ ಕಾರಣವಾದ ಸ್ಟಾರ್ಟ್ ಅಪ್ ಫೌಂಡರ್ ಮತ್ತು ಸಿಇಒ ಸೂಚನಾ ಸೇಠ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಹೆತ್ತ ಮಗನನ್ನು ಹತ್ಯೆ ಮಾಡಿರುವ ಮಹಿಳೆ ಸದ್ಯ ಚಿತ್ರದುರ್ಗದ ಐಮಂಗಲ ಪೊಲೀಸರ ವಶದಲ್ಲಿದ್ದಾರೆ.
ಮಗನ ಹತ್ಯೆ ಆಗಿದ್ದು ಹೇಗೆ..!?
ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಸಿಇಒ ಸೂಚನಾ ಸೇಠ್ ಗೋವಾಕ್ಕೆ ತೆರಳಿದ್ದರು. ಉತ್ತರ ಗೋವಾದ ಕಂಡೋಲಿಮಾ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗನ ಹತ್ಯೆ ಮಾಡಿದ್ದಾರೆ. ಬಳಿಕ ಬಾಡಿಗೆ ಕಾರಿನಲ್ಲಿ ಮಗನ ಶವ ಇಟ್ಟುಕೊಂಡು ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಮಹಿಳೆ ತಂಗಿದ್ದ ಸರ್ವೀಸ್ ಅಪಾರ್ಟ್‌ಮೆಂಟ್ ಕ್ಲೀನಿಂಗ್‌ಗೆ ಸಿಬ್ಬಂದಿ ಹೋದಾಗ ರಕ್ತದ ಕಲೆ ಪತ್ತೆಯಾಗಿದೆ. ಸರ್ವೀಸ್ ಅಪಾರ್ಟ್‌ಮೆಂಟ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಮಗನ ಜೊತೆ ಬಂದಿದ್ದ ಮಹಿಳೆ ವಾಪಸ್ ಹೋಗುವಾಗ ಮಗ ಇಲ್ಲದೇ ಖಾಲಿ ಮಾಡಿದ್ದು ಬೆಳಕಿಗೆ ಬಂದಿದೆ. ತಕ್ಷಣವೇ ಗೋವಾ ಪೊಲೀಸ್ ಇನ್ಸ್‌ಪೆಕ್ಟರ್, ಸೂಚನಾ ಸೇಠ್ ಸಂಪರ್ಕಿಸಿ ಮಾತನಾಡಿದ್ದಾರೆ. ಆಗ ಆಕೆ ನನ್ನ ಮಗ ಸ್ನೇಹಿತರ ಮನೆಯಲ್ಲಿ ಇದ್ದಾನೆ ಎಂದು ತಿಳಿಸಿದ್ದಾರೆ. ಆ ಸ್ನೇಹಿತನ ಮನೆ ವಿಳಾಸ ಕೇಳಿದಾಗ ನಕಲಿಯಾಗಿದ್ದು ಕಂಡು ಬಂದಿದೆ.
ಇದಾದ ಮೇಲೆ ಗೋವಾ ಪೊಲೀಸರು ಮತ್ತೆ ಸೂಚನಾ ಸೇಠ್ ಪ್ರಯಾಣಿಸುತ್ತಿದ್ದ ಕಾರಿನ ಚಾಲಕನ ಜೊತೆ ಮಾತನಾಡಿದ್ದಾರೆ. ಕಾರು ಚಾಲಕನಿಗೆ ಪೊಲೀಸರು ನೀನು ಹತ್ತಿರದ ಪೊಲೀಸ್ ಠಾಣೆಗೆ ಹೋಗು ಎಂದಿದ್ದಾರೆ. ಪೊಲೀಸರು ಸೂಚನೆ ಅಂತೆ ಟ್ಯಾಕ್ಸಿ ಚಾಲಕ ಚಿತ್ರದುರ್ಗದ ಐಮಂಗಲ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಆಗ ಕಾರಿನಲ್ಲಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಮಗನ ಶವ ಇರೋದು ಬೆಳಕಿಗೆ ಬಂದಿದೆ.
ತಾಯಿಯೇ 4 ವರ್ಷದ ಮಗನನ್ನು ಹತ್ಯೆ ಮಾಡಿದ್ದು ಏಕೆ ಎಂಬ ಕಾರಣ ಇನ್ನೂ ನಿಗೂಢವಾಗಿದೆ. ಹೆತ್ತ ತಾಯಿಯಿಂದಲೇ ಈ ರೀತಿ ಮಗನ ಹತ್ಯೆ ಆಗಿರೋದು ನಿಜಕ್ಕೂ ಆಘಾತಕಾರಿಯಾಗಿದೆ. ಆರೋಪಿ ಸೂಚನಾ ಸೇಠ್ ಸದ್ಯ ಚಿತ್ರದುರ್ಗದ ಐಮಂಗಲ ಪೊಲೀಸ್ ವಶದಲ್ಲಿದ್ದಾರೆ. ಗೋವಾ ಪೊಲೀಸರು ಇಂದು ಐಮಂಗಲಕ್ಕೆ ಬಂದು ಸೂಚನಾ ಸೇಠ್ ಅವರನ್ನು ಕರೆದೊಯ್ಯಲಿದ್ದಾರೆ. ತಾಯಿಯ ವಿಚಾರಣೆ ಬಳಿಕ ಹತ್ಯೆಯ ಅಸಲಿ ಕಾರಣ ಬಹಿರಂಗವಾಗಲಿದೆ.
ಯಾರಿವರು ಸೂಚನಾ ಸೇಠ್..!?
ಬೆಂಗಳೂರಲ್ಲಿದ್ದ ಸೂಚನಾ ಸೇಠ್ ಅವರು ದಿ ಮೈಂಡ್ ಫುಲ್ AI ಲ್ಯಾಬ್ ಕಂಪನಿಯ ಸಿಇಒ ಆಗಿದ್ದಾರೆ. ಇವರ ಲಿಂಕ್ಡನ್ ಪ್ರೊಫೈಲ್‌ನಲ್ಲಿ AI ಎಥಿಕ್ಸ್ ಎಕ್ಸ್‌ಫರ್ಟ್ ಎಂದು ಉಲ್ಲೇಖವಾಗಿದೆ. ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಕೆಲಸ ಮಾಡಿ ಬಂದಿರುವ ಸೂಚನಾ ಸೇಠ್, AI ಎಥಿಕ್ಸ್ ಲಿಸ್ಟ್ ನಲ್ಲಿ ನೂರು ಮಂದಿ ಬ್ರಿಲಿಯೆಂಟ್ ಮಹಿಳೆಯರಲ್ಲಿ ಒಬ್ಬರು ಎಂದು ಬರೆಯಲಾಗಿದೆ.