ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಇದೇ ಜನವರಿ 22ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಆ ಶುಭ ಘಳಿಗೆಗೆ ಕೋಟ್ಯಾಂತರ ರಾಮನ ಭಕ್ತರು ಕಾಯುತ್ತಿದ್ದಾರೆ.
ಇದರ ಜೊತೆಗೆ ಇಡೀ ಅಯೋಧ್ಯೆ ಮದುವಣಗಿತ್ತಿಯಂತೆ ಸಿಂಗಾರಗೊಂಡು ಇಡೀ ನಗರ ಕೇಸರಿಮಯವಾಗಿದೆ. ಎಲ್ಲೆಲ್ಲೂ ರಾಮ ಜಪ ರಾಮನಾಮದ ಝೇಂಕಾರವೇ ಮೊಳಗುತ್ತಿದೆ. ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ಹಿನ್ನೆಲೆ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗ್ತಿದೆ. ಈ ಸಂಭ್ರಮದ ಮಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ಮಂದಿರದ ವೀಡಿಯೋವೊಂದನ್ನು ರಿಲೀಸ್ ಮಾಡಲಾಗಿದೆ.
ಅಯೋಧ್ಯೆಯ ರಾಮಮಂದಿರದ ಒಂದು ಅದ್ಭುತ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಈ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ. ದೇವಾಲಯದ ರಚನೆಯು 20 ಅಡಿ ಎತ್ತರದ ಮಹಡಿಗಳನ್ನು ಒಳಗೊಂಡಿರುತ್ತದೆ. 392 ಕಂಬಗಳು ಮತ್ತು 44 ದ್ವಾರಗಳ ಪ್ರಭಾವಶಾಲಿ ವ್ಯವಸ್ಥೆಯಿಂದ ಅಲಂಕರಿಸಲ್ಪಟ್ಟಿದೆ.
ಟ್ರಸ್ಟ್ ರಿಲೀಸ್ ಮಾಡಿದ ವೀಡಿಯೋದಲ್ಲಿ ಸಿಂಹ ದ್ವಾರದ ಮೆಟ್ಟಿಲುಗಳ ಎರಡು ಕಡೆ ಎರಡು ಸಿಂಹದ ಮೂರ್ತಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಎರಡು ಕಡೆ ಎರಡು ಆನೆಯ ಮೂರ್ತಿ ನಿರ್ಮಾಣ ಮಾಡಲಾಗಿದೆ. ಪೂರ್ವ ದಿಕ್ಕಿನ ಮೆಟ್ಟಿಲು ಹತ್ತಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಪೂರ್ವ ದಿಕ್ಕಿನ ಮೊದಲ ಗೋಪುರ ಹಾಗೂ ಗೋಪುರದ ಮೇಲ್ಭಾಗದಲ್ಲಿ ಕಳಸ ಕೆತ್ತನೆಯ ಕೆಲಸ ಪೂರ್ಣಗೊಂಡಿದೆ.
ಮಂದಿರದ ಪೂರ್ವ ದಿಕ್ಕಿನ ದ್ವಾರಕ್ಕೆ ಸಿಂಹ ದ್ವಾರ ಎಂದು ನಾಮಕರಣ ಮಾಡಲು ಸಿದ್ದತೆ ನಡೆಸಲಾಗಿದೆ. ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ 7,000ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನ ಮಾಡಲಾಗಿದೆ. ಅದರಲ್ಲೂ ಸೆಲೆಬ್ರಿಟಿ ಹಾಗೂ ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳನ್ನು ರಾಮಮಂದಿರದ ಲೋಕಾರ್ಪಣೆಗೆ ಆಹ್ವಾನಿಸಲಾಗಿದೆ.
ಅಯೋಧ್ಯೆಯಲ್ಲಿ ಮೂರು ಅಂತಸ್ತಿನ ರಾಮ ಮಂದಿರ ನಿರ್ಮಾಣ ಈ ವರ್ಷದ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.