ಪೆರುವಾಜೆ : ಇಪ್ಪತ್ತೊಂದು ಗ್ರಾಮಗಳಿಗೆ ಒಳಪಟ್ಟಿರುವ ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವಕ್ಕೆ ಜ.15 ರಿಂದ 21 ರ ತನಕ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ದಿನ ನಿತ್ಯವೂ ನೂರಾರು ಭಕ್ತರು ಶ್ರಮದಾನದಲ್ಲಿ ತೊಡಗಿಕೊಂಡಿದ್ದಾರೆ.
ಚಪ್ಪರ ಮುಹೂರ್ತ, ನೂತನ ಬ್ರಹ್ಮರಥ ಭೂಮಿ ಸ್ಪರ್ಶದ ಬಳಿಕ ಜಾತ್ರೆಯ ಸಂಭ್ರಮ ಪ್ರಾರಂಭಗೊಂಡಿತ್ತು. ವಿವಿಧ ವಿಭಾಗದಲ್ಲಿ ಸ್ವಯಂಸೇವಕರ ತಂಡ ಶ್ರಮದಾನದ ಮೂಲಕ ಪೂರ್ವ ತಯಾರಿ ಕೆಲಸದಲ್ಲಿ ತೊಡಗಿಕೊಂಡಿದೆ. ಸಂಘ ಸಂಸ್ಥೆಗಳು, ಭಕ್ತಾಧಿಗಳು ಹಗಲು, ರಾತ್ರಿ ಶ್ತೀಕ್ಷೇತ್ರದಲ್ಲಿ ವಿವಿಧ ಕೆಲಸ ನಿರ್ವಹಿಸುತ್ತಿದ್ದಾರೆ.
ದೇವಾಲಯದಲ್ಲಿ ಹಾಗೂ ಹೊರಭಾಗದಲ್ಲಿ ಚಪ್ಪರ, ಅನ್ನದಾನದ ಸ್ಥಳದಲ್ಲಿ ಚಪ್ಪರ, ದೇವರ ಪೇಟೆ ಸವಾರಿ, ಕಟ್ಟೆಪೂಜೆ, ಅವಭೃತಕ್ಕೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ಅಲಂಕಾರ, ಸ್ವಚ್ಚತಾ ಕೆಲಸ ಸೇರಿದಂತೆ ಬೇರೆ-ಬೇರೆ ವಿಭಾಗದಲ್ಲಿ ಸ್ವಯಂಸೇವಕರು ಶ್ರಮದಾನದ ಮೂಲಕ ಭಾಗವಹಿಸುತ್ತಿದ್ದಾರೆ.
ಭಕ್ತರಿಂದ ಸ್ಪಂದನೆ
ಶ್ರೀ ಕ್ಷೇತ್ರದಲ್ಲಿ 100 ವರ್ಷಗಳ ಬಳಿಕ ಬ್ರಹ್ಮರಥೋತ್ಸವ ನಡೆಯುತ್ತಿರುವುದು ಈ ಬಾರಿಯ ಜಾತ್ರೆಯ ವಿಶೇಷತೆ. ಹೀಗಾಗಿ ಹತ್ತೂರಿನ ಭಕ್ತರು ಭಾಗವಹಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಭಕ್ತರ ಸಹಕಾರದಿಂದ ಸಿದ್ಧತಾ ಕೆಲಸಗಳು ಭರದಿಂದ ಸಾಗುತ್ತಿದೆ. ಜ.15 ರಿಂದ 21 ರ ತನಕ ಜಾತ್ರೆ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪದ್ಮನಾಭ ಶೆಟ್ಟಿ ಪೆರುವಾಜೆ
ಅಧ್ಯಕ್ಷರು
ವ್ಯವಸ್ಥಾಪನ ಸಮಿತಿ
ಶ್ರೀ ಜಲದುರ್ಗಾದೇವಿ ದೇವಾಲಯ, ಪೆರುವಾಜೆ
ಸ್ವಯಂಸೇವಕರಾಗಿ ಸೇವೆ ಸಲ್ಲಿಸೋಣ
ಶ್ರೀ ಈ ಕ್ಷೇತ್ರದಲ್ಲಿ ಸ್ವಯಂಸೇವಕರು ಶ್ರಮದಾನ ನಡೆಸುತ್ತಿದ್ದಾರೆ. ಬೆಳಗ್ಗೆ, ರಾತ್ರಿ ವೇಳೆ ನೂರಾರು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನೂ ಐದು ದಿನದಲ್ಲಿ ಜಾತ್ರಾ ಸಡಗರ ಆರಂಭಗೊಳ್ಳಲಿದ್ದು ಪ್ರತಿ ದಿನವೂ ಶ್ರಮದಾನಕ್ಕೆ ಅವಕಾಶ ಇದೆ. ಹೀಗಾಗಿ ಭಕ್ತವೃಂದ ಸ್ವಯಂಸೇವಕರಾಗಿ ಬಂದು ದೇವರ ಕಾರ್ಯದಲ್ಲಿ ಸೇವೆ ಸಲ್ಲಿಸಬಹುದು.
ಜಯಪ್ರಕಾಶ ರೈ ಪೆರುವಾಜೆ
ನಿರ್ವಾಹಕರು, ಸ್ವಯಂಸೇವಕ ವಿಭಾಗ