ಬಂಟ್ವಾಳ : ತಾಯಿ ಮತ್ತು ಮಗಳಿದ್ದ ಮನೆಗೆ ನುಗ್ಗಿದ ಖದೀಮರು ನಗ-ನಗದು ದೋಚಿದ ಘಟನೆ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಬಿ.ಸಿ.ರೋಡು – ಬೆಳ್ತಂಗಡಿ ರಾಜ್ಯಹೆದ್ದಾರಿ ರಸ್ತೆಯ ತಿಮ್ಮಕ್ಕ ಉದ್ಯಾನವನ ಸಮೀಪದ ಮೇನಾಡು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆರಿಟಾ ಸಿಂತಿಯಾ ಪಿಂಟೋ ರವರು ಕಾವಳಪಡೂರು ಗ್ರಾಮದ ಬಿ.ಸಿ.ರೋಡು – ಬೆಳ್ತಂಗಡಿ ರಾಜ್ಯ ಹೆದ್ದಾರಿ ರಸ್ತೆಯ ತಿಮ್ಮಕ್ಕ ಉದ್ಯಾನವನ ಸಮೀಪದ ಮೇನಾಡು ಎಂಬಲ್ಲಿ ತನ್ನ ಪ್ರಾಯಸ್ಥ ತಾಯಿಯ ಜೊತೆ ವಾಸ್ತವ್ಯವಿದ್ದು, ಜ.11 ರಂದು ಮುಂಜಾನೆ ಸಮಯ, 4 ಜನ ಅಪರಿಚಿತರು ಬಂದು ಮನೆಯ ಕಾಲ್ ಬೆಲ್ ಒತ್ತಿದ್ದು, ಈ ವೇಳೆ ಬಾಗಿಲು ತೆಗೆದಾಗ ಚಾಕು ತೋರಿಸಿ ಬೆದರಿಸಿದ ಆರೋಪಿಗಳು, ಮನೆಯ ಒಳಗೆ ಜಾಲಾಡಿ, ಕಪಾಟಿನಲ್ಲಿದ್ದ ಅಂದಾಜು ರೂ 3,20,000/-ಮೌಲ್ಯದ ಒಟ್ಟು 82 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು, ರೂ 11,000/- ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡಿರುವುದಲ್ಲದೆ, ಬೆದರಿಕೆ ಒಡ್ಡಿ ರೂ 30,000/- ನಗದು ಹಣವನ್ನು ಪಡೆದು ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 03/2024 ಕಲಂ 394 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ ರಿಷ್ಯಂತ್ ಐ.ಪಿ.ಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

























