ನವದೆಹಲಿ : ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮಧ್ಯಂತರ ಬಜೆಟ್ ಫೆ.1ರ ಬೆಳಗ್ಗೆ 11 ಗಂಟೆಗೆ ಮಂಡನೆಯಾಗಲಿದೆ.
17ನೇ ಲೋಕಸಭೆಯ ಕೊನೆಯ ಅಧಿವೇಶನ ಇದೇ ಮಾಸಾಂತ್ಯದಿಂದ ಆರಂಭಗೊಳ್ಳಲಿದೆ. ಜನವರಿ 31ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣದೊಂದಿಗೆ ಆರಂಭಗೊಳ್ಳುವ ಅಧಿವೇಶನದಲ್ಲಿ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್ ಅವರು ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಫೆ.1 ಯಾಕೆ..!?
ಈ ಮೊದಲು ಫೆಬ್ರವರಿ ಕೊನೆಯಲ್ಲಿ ಅಥವಾ ಮಾರ್ಚ್ ತಿಂಗಳ ಒಂದು ದಿನ ಹಣಕಾಸು ಬಜೆಟ್ ಮಂಡನೆಯಾಗುತ್ತಿತ್ತು. ಆದರೆ 2017-18 ಹಣಕಾಸು ವರ್ಷದ ಬಜೆಟ್ ಅನ್ನು ಅರುಣ್ ಜೇಟ್ಲಿ ಫೆ.1 ರಂದು ಮಂಡನೆ ಮಾಡಿದ್ದರು. 2017 ರಿಂದ ಈ ಸಂಪ್ರದಾಯ ಮುಂದುವರಿಯುತ್ತಾ ಬಂದಿದೆ. 2015 ರಲ್ಲಿ ಫೆ.28, 2016ರಲ್ಲಿ ಫೆ.29 ರಂದು ಜೇಟ್ಲಿ ಮಂಡನೆ ಮಾಡಿದ್ದರು. 2019ರಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದಾರೆ.


























