ಬಂಟ್ವಾಳ : ಹೆಂಡತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪತಿ, ಆಕೆಗೆ ಹಲ್ಲೆ ನಡೆಸಿ 33 ಪವನ್ ಚಿನ್ನ ದೋಚಿದ ಪ್ರಕರಣ ಡಿ.30 ರಂದು ನಡೆದಿದ್ದು, ಮಹಿಳೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಆಕೆಯ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ಪುದು ಗ್ರಾಮ ನಿವಾಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಪತಿ ಉಮ್ಮರ್ ಫಾರೂಕ್, ಆತನ ಸಹೋದರರಾದ ಮುಸ್ತಾಫಾ, ರಿಯಾಜ್, ಮೊಹಮ್ಮದ್, ಸಂಬಂಧಿಕರಾದ ದುಲೇಕಾ, ಆಸ್ಮಾ, ಅರ್ಷಿದಾ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಮಾರು 14 ವರ್ಷಗಳ ಹಿಂದೆ ಮಹಿಳೆಗೆ ಉಮ್ಮರ್ ಫಾರೂಕ್ ಜೊತೆ ವಿವಾಹವಾಗಿದ್ದು, ಈ ವೇಳೆ 5 ಲಕ್ಷ ರೂ. ಹಾಗೂ 63 ಪವನ್ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಬಳಿಕ ಪತಿ ಹೆಚ್ಚಿನ ಹಣ ತರುವಂತೆ ಪತ್ನಿಗೆ ಕಿರುಕುಳದ ಜೊತೆಗೆ ಹಲ್ಲೆಯನ್ನೂ ಮಾಡುತ್ತಿದ್ದನು. ಆತನ ಸಹೋದರರು, ಅವರ ಪತ್ನಿಯರು ಕೂಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮಹಿಳೆ ನಂದಾವರದಲ್ಲಿ ಫ್ಲಾಟ್ ಖರೀದಿಸಿ ವಾಸವಾಗಿದ್ದರು. ಪತಿಯು ಡಿ.30 ರಂದು ಆಕೆಯ ಫ್ಲಾಟ್ಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು ನೀನು ಬೇಡ, ಬೇರೆ ಮದುವೆಯಾಗುವುದಾಗಿ ಹೇಳಿ ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























