ನವದೆಹಲಿ : ದಟ್ಟ ಮಂಜು, ವಿಪರೀತ ಚಳಿಯಿಂದ ಉತ್ತರ ಭಾರತದಲ್ಲಿ ಆಗುತ್ತಿರೋ ಅನಾಹುತಗಳು ಒಂದೆರಡಲ್ಲ. ಈ ಮಂಜು ವಾತಾವರಣದಿಂದ ನೂರಾರು ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಜನರು ಸರಿಯಾದ ಟೈಮ್‌ಗೆ ಫ್ಲೈಟ್ ಸಿಗದೇ ಒದ್ದಾಡುತ್ತಿದ್ದಾರೆ. ಹೀಗೆ ದೆಹಲಿ ಏರ್‌ಪೋರ್ಟ್‌ನಲ್ಲಿ ಇಂಡಿಗೋ ಫ್ಲೈಟ್ 13 ಗಂಟೆ ತಡವಾಗಿದ್ದು ಸಖತ್ ಸುದ್ದಿಯಾಗಿದೆ. ಪ್ರಯಾಣಿಕನೊಬ್ಬ ಪೈಲೆಟ್ ಮೇಲೆ ಹಲ್ಲೆ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆ ಕಾರಣವಾಗಿದೆ.
ಕಳೆದ ಭಾನುವಾರ ದೆಹಲಿಯಿಂದ ಗೋವಾಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ.
ಗೋವಾಗೆ ಟಿಕೆಟ್ ಬುಕ್ ಮಾಡಿದ್ದ ಪ್ರಯಾಣಿಕರು ಅಂದು ಬೆಳಗ್ಗೆ 7.40ಕ್ಕಿದ್ದ ಫ್ಲೈಟ್ ಸಂಜೆ 6.40ರವರೆಗೂ ಕಾದಿದ್ದಾರೆ. ಈ ಮಧ್ಯೆ 28 ವರ್ಷದ ಸಾಹಿಲ್ ಕಟಾರಿಯಾ ಕಾದು, ಕಾದು ಸುಸ್ತಾಗಿ ತಾಳ್ಮೆ ಕಳೆದುಕೊಂಡಿದ್ದರು. ಕೊನೆಗೆ ಲೇಟ್ ಆಗುತ್ತೆ ಎಂದು ಅನೌನ್ಸ್ ಮಾಡುತ್ತಿದ್ದ ಕೋ-ಪೈಲೆಟ್ ಮೇಲೆಯೇ ದಾಳಿ ಮಾಡಿದ್ದರು. ಸಾಹಿಲ್ ಕಟಾರಿಯಾ ಅವರು ಪೈಲೆಟ್‌ಗೆ ಪಂಚ್ ಕೊಟ್ಟ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.
ಇಂಡಿಗೋ ವಿಮಾನದಲ್ಲಿ ನಡೆದ ಈ ಘಟನೆ ಸಂಚಲನ ಸೃಷ್ಟಿಸಿದ್ದು, ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಇಂಡಿಗೋ ಪೈಲೆಟ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಸಾಹಿಲ್ ಕಟಾರಿಯಾ ಅವರನ್ನು ಬಂಧಿಸಿದ್ದಾರೆ. ಕೋರ್ಟ್‌ನಲ್ಲಿ ಜಾಮೀನು ಸಿಕ್ಕ ಬಳಿಕ ಬಿಡುಗಡೆಯನ್ನು ಮಾಡಿದ್ದಾರೆ.
ಹನಿಮೂನ್‌ಗೆ ಲೇಟ್ ಆದ ಸಿಟ್ಟು.!
ಸಾಹಿಲ್ ಕಟಾರಿಯಾ ಹಲ್ಲೆ ಪ್ರಕರಣದ ವಿಚಾರಣೆಯಲ್ಲಿ ಮತ್ತಷ್ಟು ಸಂಗತಿಗಳು ಬಯಲಾಗಿದೆ. ಸಹ ಪೈಲೆಟ್ 10 ಗಂಟೆ ಕಾಯಿಸಿದ ಬಳಿಕ ಇನ್ನೂ ತಡವಾಗಲಿದೆ. ಪ್ರಯಾಣಿಕರು ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದರೆ ಮತ್ತಷ್ಟು ವಿಳಂಬ ಆಗಲಿದೆ ಎಂದಿದ್ದಾರೆ. ಆಗ ಸಾಹಿಲ್ ಕಟಾರಿಯೂ ಕೂಗಾಡುತ್ತಾ ನಮ್ಮನ್ನು ಕರೆದುಕೊಂಡು ಹೋಗುವುದಿದ್ದರೆ ಕರೆದುಕೊಂಡು ಹೋಗಬೇಕು. ಇಲ್ಲದಿದ್ರೆ ಡೋರ್ ಓಪನ್ ಮಾಡಿ ಎಂದಿದ್ದಾರೆ. ಕೊನೆಗೆ ಕೋ- ಪೈಲೆಟ್ ಮೇಲೆಯೇ ಹಲ್ಲೆ ಮಾಡಿದ್ದಾರೆ.
ಸಾಹಿಲ್ ಕಟಾರಿಯಾ ಅವರು ವಿಚಾರಣೆ ವೇಳೆ ನಾನು ಯಾಕೆ ಹಾಗೆ ಮಾಡಿದೆ ಅನ್ನೋದನ್ನು ಹೇಳಿದ್ದಾರೆ. ಗೋವಾಗೆ ಹನಿಮೂನ್‌ಗೆಂದು ಹೊರಟಿದ್ದೆ. ಹೀಗಾಗಿ ಕೋಪದಲ್ಲಿ ಈ ರೀತಿ ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ. ಈತನ ವಿಚಾರಣೆ ನಡೆಸಿದ ಪೊಲೀಸರು ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಈ ವ್ಯಕ್ತಿಯು ಕಳೆದ 6 ತಿಂಗಳ ಹಿಂದೆ ಮದುವೆ ಆಗಿದ್ದರು ಅನ್ನೋ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಏರ್‌ಪೋರ್ಟ್‌ಗಳಲ್ಲಿ ವಾರ್ ರೂಮ್..!
ದೇಶದ ಹಲವು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟದ ದೃಶ್ಯಗಳು ಕಂಡು ಬರುತ್ತಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ಆನ್‌ಬೋರ್ಡ್‌ನಲ್ಲೇ ಕುಳಿತು ಊಟ ಮಾಡಿದ ವಿಡಿಯೋಗಳು ವೈರಲ್ ಆಗಿದೆ. ಇನ್ನು, ವಿಮಾನ ಪ್ರಯಾಣದ ಈ ಸಮಸ್ಯೆಗೆ ಪರಿಹಾರ ಹುಡುಕಲು ಭಾರತೀಯ ವಿಮಾನಯಾನ ಸಂಸ್ಥೆ ಮುಂದಾಗಿದೆ. ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ವಾರ್ ರೂಮ್‌ಗಳನ್ನ ಸ್ಥಾಪಿಸಲಾಗುತ್ತಿದ್ದು, ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನಾಗರಿಕ ವಿಮಾನಯಾನ ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ತಿಳಿಸಿದ್ದಾರೆ.


























